ಬೆಂಗಳೂರು:ಪಠ್ಯ ಪರಿಷ್ಕರಣೆಗೆ ರಾಜ್ಯದ ಹಲವು ಸಾಹಿತಿಗಳು ತಮ್ಮ ಪ್ರತಿರೋಧ ಒಡ್ಡಿದ್ದರು. ಇನ್ನೊಂದೆಡೆ ಆರ್‌ಎಸ್‌ಎಸ್ ಚಡ್ಡಿ ಸುಡುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಪರಿಷ್ಕೃತ ಪಠ್ಯವನ್ನು ವಿರೋಧಿಸಿದ್ದರು. ಇದೇ ವಿವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್-ಬಿಜೆಪಿ ನಡುವೆ ಟ್ವಿಟರ್‌ನಲ್ಲಿ ವಾಗ್ಯುದ್ಧವೇ ನಡೆದಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದೆ. ಚಡ್ಡಿ ಸುಡುವುದು ಸಾಂಕೇತಿಕ ಪ್ರತಿಭಟನೆ ಎಂದು ವ್ಯಾಖ್ಯಾನಿಸುವ ಸಿದ್ದರಾಮಯ್ಯ ಅವರೇ, ಜವಾಹರ್ ಲಾಲ್ ನೆಹರೂ ಅವರೂ ಚಡ್ಡಿ ತೊಟ್ಟಿದ್ದು ಗೊತ್ತೇ? ಹಾಗಾದರೆ ನಿಮ್ಮ ಪ್ರತಿಭಟನೆಯ ವ್ಯಾಪ್ತಿಯಲ್ಲಿ ನೆಹರೂ ಅವರೂ ಇದ್ದಾರಾ? ಎಂದು ಕಾಲೆಳೆದಿದೆ.
ಈ ಹಿಂದೆ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಸಡಿಲಗೊಂದಡು ಕಳಚಿತ್ತು. ಇದರ ವಿಡಿಯೋ ಲಿಂಕ್ ಹಂಚಿಕೊಂಡಿರುವ ಬಿಜೆಪಿ, 'ನಿಮ್ಮ ಪಂಚೆ ಬಿದ್ದ ನಂತರ ಮಾನ ಕಾಪಾಡಿದ್ದೇ ಚಡ್ಡಿ! ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ! ಎಂದು ಕೆಣಕಿದೆ. ಹಾಗೂ 'ತುಂಡುಬಟ್ಟೆ ಇದ್ದರೆ ಸಾಕು ಮಾನ ಮುಚ್ಚೋಕೆ...! ಅದನ್ನೇ ಸುಟ್ಟು ಏನು ಸಾಧಿಸಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ?' ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.
'ಸಿದ್ದರಾಮಯ್ಯನವರೇ, ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಕ್ಕೆ ಮುನ್ನ ನಿಮ್ಮ ಕಾರ್ಯಕರ್ತರಿಗೆ ಒಂದು ಎಚ್ಚರಿಕೆ ನೀಡಿ. ನಲಪಾಡ್ ಅವನಂತಹ ಬೀದಿ ರೌಡಿಗಳು ಬೇರೆಯವರ ಚಡ್ಡಿ ಕದ್ದು ಸುಡುವ ಅಪಾಯವಿದೆ. ಚಡ್ಡಿ ಮಾನದ ಸಂಕೇತ. ಶ್ರಮಿಕ ವರ್ಗದ ಸಂಕೇತ. ನೀವು ಚಡ್ಡಿ ಸುಡುವ ಅಭಿಯಾನ ನಡೆಸಿ ನಿಮ್ಮ ಮಾನವನ್ನು ನೀವೇ ಸುಟ್ಟುಕೊಳ್ಳಲು ಹೊರಟಿದ್ದೀರಿ. ದೇಶಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರಿಗೆ ಈಗ ಉದ್ಯೋಗವಿಲ್ಲ. ಹೀಗಾಗಿ ಚಡ್ಡಿ ಸುಡುವ ಅಭಿಯಾನ ನಡೆಸಿ ಮತ್ತೆ ದೇಶದ ಜನರ ಮುಂದೆ ಬೆತ್ತಲಾಗಲು ಹೊರಟಿದ್ದಾರಷ್ಟೆ! ಎಂದು ರಾಜ್ಯ ಬಿಜೆಪಿಯು ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದೆ.
PublicNext
05/06/2022 05:09 pm