ದಾವಣಗೆರೆ: ಸರ್ಕಾರಿ ಕಾರ್ಯಕ್ರಮದಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಪತ್ನಿ ದರ್ಬಾರ್ ನಡೆಸಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ನಿಯಮದ ಪ್ರಕಾರ ರೇಣುಕಾಚಾರ್ಯ ಅವರ ಪತ್ನಿ ಸುಮಾ ರೇಣುಕಾಚಾರ್ಯ ವೇದಿಕೆ ಮೇಲೆ ಕುಳಿತುಕೊಳ್ಳುವಂತಿಲ್ಲ. ಶಿಷ್ಟಾಚಾರ ಪಾಲಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವೇದಿಕೆ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಶಾಸಕರ ಪತ್ನಿ ಸುಮಾ ರೇಣುಕಾಚಾರ್ಯ ಅವರನ್ನು ಕಾರ್ಯಕ್ರಮ ಸಂಘಟಕರು ಆಹ್ವಾನಿಸುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಮೂಡಿಸಿತು. ಸುಮಾ ರೇಣುಕಾಚಾರ್ಯ ಜನಪ್ರತಿನಿಧಿ ಅಲ್ಲ. ಆದರೂ ವೇದಿಕೆ ಮೇಲೆ ಕೂರಿಸಿದ್ದು ಈಗ ಚರ್ಚೆಗೆ ಕಾರಣ ಆಗಿದೆ.
ಸಂಸದ ಜಿ.ಎಂ. ಸಿದ್ದೇಶ್ವರ್, ಸಚಿವ ಬೈರತಿ ಬಸವರಾಜ್, ಶಾಸಕ ಪ್ರೊ. ಲಿಂಗಣ್ಣ, ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ರಿಷ್ಯಂತ್ ಭಾಗಿಯಾಗಿದ್ದರು. ರೇಣುಕಾಚಾರ್ಯ ವೇದಿಕೆ ಮೇಲಿದ್ದರೂ ಈ ಬಗ್ಗೆ ಚಕಾರ ಎತ್ತಲಿಲ್ಲ. ಸರ್ಕಾರಿ ಅಧಿಕಾರಿಗಳ ಲೋಪಕ್ಕೆ ಜನರ ಆಕ್ರೋಶ ವ್ಯಕ್ತವಾಯಿತಲ್ಲದೆ, "ಶಾಸಕರು ಅಧಿಕಾರ ಮದದಿಂದ ಕುಟುಂಬ ಕಾರ್ಯಕ್ರಮ ಅಂದುಕೊಂಡಿದ್ದಾರೆ. ಡಿಸಿ ಇದ್ದರೂ ಈ ಬಗ್ಗೆ ಯಾಕೆ ಕ್ರಮ ಕೈಗೊಳ್ಳಲಿಲ್ಲ" ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದ ಸುಮಾ ರೇಣುಕಾಚಾರ್ಯ ವರ್ತನೆಗೆ ಜನರು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣ ಹಲವು ಸರ್ಕಾರಿ ಕಾರ್ಯಕ್ರಮಗಳ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತು ದರ್ಬಾರ್ ನಡೆಸಿರುವುದು ರೇಣುಕಾಚಾರ್ಯರ ಅಧಿಕಾರ ದರ್ಪಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
05/06/2022 04:36 pm