ದಾವಣಗೆರೆ: "ಆರೆಸ್ಸೆಸ್ ಕಚೇರಿಗೆ ಬನ್ನಿ... ಚಡ್ಡಿ ಹಾಕಿಕೊಳ್ಳಿ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಆರ್ ಎಸ್ ಎಸ್ ಕಚೇರಿಗೆ ಬಂದರೆ ಸಂಸ್ಕೃತಿ ನಿಮಗೆ ಗೊತ್ತಾಗುತ್ತೆ ಎಂದರು.
ಕಾಂಗ್ರೆಸ್ ಗೆ ದೇಶದಲ್ಲಿ ಅಡ್ರೆಸ್ ಇಲ್ಲ, ರಾಜ್ಯದಲ್ಲಿಯೂ ಇಲ್ಲ. ಚಡ್ಡಿ ದೇಶವನ್ನು ಕಾಪಾಡಿದೆ. ಆರ್ ಎಸ್ ಎಸ್ ಜನರ ಸೇವೆಗೆ ಅರ್ಪಣೆ ಮಾಡಿಕೊಂಡಿದೆ. ಪ್ರಕೃತಿ ವಿಕೋಪ, ಕೋವಿಡ್ ಬಂದಾಗ ಜನರ ಸೇವೆಗೆ ನಿಂತಿತ್ತು, ಆರ್ ಎಸ್ ಎಸ್ ದೇಶಾಭಿಮಾನ, ಸಂಸ್ಕೃತಿ ಬಗ್ಗೆ ಹೇಳಿಕೊಡುತ್ತೆ. ಆದ್ರೆ, ಕಾಂಗ್ರೆಸ್ ಭಯೋತ್ಪಾದನೆ, ಉಗ್ರವಾದ ಬೆಂಬಲಿಸುತ್ತೆ. ಚಡ್ಡಿ ಸುಟ್ಟು ಹಾಕಿದರೆ ಅವರೇ ಭಸ್ಮವಾಗುತ್ತಾರೆ. ಭಸ್ಮಾಸುರ ಕೈ ಇಟ್ಟರೆ ಏನಾಗುತ್ತೆ ಎಂಬ ಕಥೆಯನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲ್ಲ. ಅದರ ಬಗ್ಗೆ ಈಗ ಮಾತನಾಡಲ್ಲ, ನನ್ನ ಗಮನ ಅಭಿವೃದ್ಧಿ ಬಗ್ಗೆ ಮಾತ್ರ. ಮಳೆ ಬಂದು ತಾಲೂಕಿನಲ್ಲಿ ಅಡಿಕೆ ಬೆಳೆಗೆ ಭಾರೀ ಹಾನಿ ಆಗಿದೆ. ರೈತರಿಗೆ ಪರಿಹಾರ ಕೊಡಿಸಲು ಕ್ರಮ ವಹಿಸುತ್ತೇನೆ. ಹೊನ್ನಾಳಿ, ನ್ಯಾಮತಿ ಅಭಿವೃದ್ಧಿ ಬಗ್ಗೆ ಮಾತ್ರ ಗಮನ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ. ವಿನಾಕಾರಣ ಅಪಪ್ರಚಾರ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
PublicNext
05/06/2022 03:36 pm