ಉತ್ತರ ಕನ್ನಡ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು ಕಳೆದ ಎರಡ್ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುರಿಕಾರ ಅವರು, ಮಿಂಚಿನ ಪ್ರಚಾರ ನಡೆಸಿದರು.
ಭಟ್ಕಳದ ನ್ಯೂ ಸ್ಯಾಮ್ ಹೈಸ್ಕೂಲ್, ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆ, ಆನಂದ ಆಶ್ರಮ ಪಿಯು ಕಾಲೇಜು, ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು, ಅಂಜುಮನ್ ಕಲಾ ಹಾಗೂ ವಿಜ್ಞಾನ ಕಾಲೇಜು, ಅಂಜುಮನ್ ಬಾಲಕರ ಹೈಸ್ಕೂಲ್, ಅಂಜುಮನ್ ಎಂಜಿನಿಯರಿಂಗ್ ಕಾಲೇಜು, ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜನತಾ ಪ್ರೌಢ ಶಾಲೆ, ಆರ್‌ಎನ್‌ಎಸ್ ಕಾಲೇಜು ಸೇರಿದಂತೆ ಅನೇಕ ಕಡೆಗಳಲ್ಲಿ ತೆರಳಿದ ಗುರಿಕಾರ ಅವರು ಶಿಕ್ಷಕರೊಂದಿಗೆ ಸಭೆ ನಡೆಸಿ ಮತಯಾಚನೆ ಮಾಡಿದರು.
ಕಳೆದ ಹಲವಾರು ವರ್ಷಗಳಿಂದ ಶಿಕ್ಷಕ ಕ್ಷೇತ್ರದಲ್ಲಿದ್ದುಕೊಂಡು ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಲ್ಲವನಾಗಿದ್ದೇನೆ. ಸ್ವತಃ ಶಿಕ್ಷಕನಾಗಿಯೂ ಕೆಲಸ ಮಾಡಿದ್ದರಿಂದ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚುನಾವಣಾ ಅಖಾಡಕ್ಕೆ ಧುಮಿಕಿದ್ದೇನೆ. ಹೀಗಾಗಿ ಶಿಕ್ಷಕರು ಈ ಬಾರಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾಗಿ ಸಾಕಷ್ಟು ಹೋರಾಟಗಳನ್ನು ಮಾಡಿ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಿದ್ದೇನೆ. ಪ್ರಸಕ್ತ ವರ್ಷ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಶಿಕ್ಷಕರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಶಿಕ್ಷಕರ ಈ ಸ್ಪಂದನೆಯನ್ನು ಗಮನಿಸಿದರೆ, ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ಜರುಗುತ್ತಿದ್ದು, ಗುರಿಕಾರ ಅವರು ಒಂದೊಂದೆ ಜಿಲ್ಲೆಯಲ್ಲಿ ಮಿಂಚಿನ ಪ್ರಚಾರ ನಡೆಸುವ ಮೂಲಕ ಎಲ್ಲ ಶಿಕ್ಷಕರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದಾರೆ. ಉತ್ತರ ಕನ್ನಡದ ಅನೇಕ ಕಡೆಗಳಲ್ಲಿ ಪ್ರಚಾರ ನಡೆಸಿದ ಗುರಿಕಾರ ಅವರಿಗೆ ಉತ್ತಮ ಸ್ಪಂದನೆ ದೊರೆಯಿತು.
PublicNext
02/06/2022 05:23 pm