ಗದಗ: ಬಂಡಾಯದ ನೆಲ ಎಂದೇ ಹೇಳಲಾಗುವ ಗದಗ ಜಿಲ್ಲೆಯ ನರಗುಂದ ತಾಲೂಕಿನಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಬಸವರಾಜ ಹೊರಟ್ಟಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಕಣಕ್ಕಿಳಿದಿದ್ದಾರೆ. ಶಿಕ್ಷಕರ ಸಾಕಷ್ಟು ಹೋರಾಟ, ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ಹಲವಾರು ವರ್ಷಗಳಿಂದ ಹೋರಾಟ ಮಾಡಿ ಶಿಕ್ಷಕರ ಕ್ಷೇತ್ರದಲ್ಲಿ ಹೋರಾಟ ಮಾಡಿರುವ ಗುರಿಕಾರ ಅವರು, ಪ್ರಸಕ್ತ ವರ್ಷ ವಿಧಾನ ಪರಿಷತ್ ಪ್ರವೇಶಿಸಿ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಧ್ವನಿಯಾಗುವ ಕನಸು ಹೊತ್ತಿದ್ದಾರೆ.
ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಮಿಂಚಿನ ಪ್ರಚಾರ ಮಾಡುತ್ತಿರುವ ಗುರಿಕಾರ ಅವರಿಗೆ ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ವರ್ಷ ಶತಾಯಗತಾಯ ಹೊರಟ್ಟಿ ವಿರುದ್ಧ ಗುರಿಕಾರ ಅವರನ್ನು ಗೆಲ್ಲಿಸಲೇಬೇಕು ಎಂದು ಕಾಂಗ್ರೆಸ್ ಮುಖಂಡರೂ ಟೊಂಕ ಕಟ್ಟಿ ನಿಂತಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಐಟಿಐ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳಿಗೆ ಭೇಟಿ ನೀಡಿದ ಗುರಿಕಾರ ಅವರು ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಗುರಿಕಾರ ಅವರಿಗೆ ಮಾಜಿ ಶಾಸಕ ಬಿ.ಆರ್.ಯಾವಗಲ್ ಕೂಡ ಸಾಥ್ ನೀಡಿದರು. ಪ್ರತಿದಿನ ಒಂದೊಂದು ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಗುರಿಕಾರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
PublicNext
30/05/2022 03:50 pm