ಬೆಂಗಳೂರು: ಚುನಾವಣಾ ಕಾಲ ಸನ್ನಿಹಿತವಾಗ್ತಿದ್ದಂತೆ ಜಾತಿ ಲೆಕ್ಕಾಚಾರದ ಜೊತೆಗೆ ನಾಯಕರ ಲೆಕ್ಕಾಚಾರ ಕೂಡ ಜೋರಾಗಿ ವರ್ಕೌಟ್ ಆಗುತ್ತೆ. ಇದೇ ಕಾರಣಕ್ಕೆ ಪಕ್ಷಾಂತರ ಮಾಡೋದು, ಬೇರೆ ಪಕ್ಷದ ನಾಯಕರನ್ನ ಸೆಳೆಯಲು ಪಾರ್ಟಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸ್ತಾರೆ. ಸದ್ಯ ರಾಜ್ಯ ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಬಿಜೆಪಿಯ ಹಿರಿಯ ಲಿಂಗಾಯತ ನಾಯಕರು ಗಾಳ ಹಾಕ್ತಿದ್ದಾರೆ ಅನ್ನೋದು ಬಿಸಿಬಿಸಿ ಸುದ್ದಿ. ಸುಪ್ರೀಂಕೋರ್ಟ್ ಹಿರಿಯ ವಕೀಲರು ಹಾಗೂ ಹಾಗೂ ಲಿಂಗಾಯತ ಸಮಾಜದ ಪ್ರಭಾವಿ ನಾಯಕ ಇದ್ರ ಜೊತೆಗೆ ರಾಜ್ಯ ಕಾಂಗ್ರೆಸ್‌ನ ವಕ್ತಾರರು ಕೂಡ ಆಗಿರೋ ಸಂಕೇತ್ ಏಣಗಿ ಬಿಜೆಪಿಗೆ ಬಂದ್ರೆ ಲಿಂಗಾಯತ ಮತ ಸೆಳೆಯಲು ಹಾಗೂ ಒಟ್ಟುಗೂಡಿಸಲು ಸುಲಭ ಆಗುತ್ತೆ ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ.
ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚುತ್ತಿರುವ ಅತೃಪ್ತಿ ಹಾಗೂ ಭಿನ್ನಮತದ ಯುಗ ಪ್ರಾರಂಭವಾದ ಹಿನ್ನೆಲೆಯಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರುಗಳು ಪಕ್ಷ ತೊರೆಯುತ್ತಿದ್ದು ಇತ್ತೀಚೆಗಷ್ಟೇ ಮಾಜಿ ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷ ಸಮಾಜವಾದಿ ಪಕ್ಷ ಸೇರಿ ರಾಜ್ಯಸಭೆಗೆ ನಾಮಪತ್ರವನ್ನು ಸಲ್ಲಿಸಿರುವುದರಿಂದ ಆಗಿರುವ ಪೆಟ್ಟಿನಿಂದ ಇನ್ನೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಚೇತರಿಸಿಕೊಳ್ಳುವ ಮುಂಚೆಯೇ ಬಿಜೆಪಿಯು ಇನ್ನಿತರ ಕಾಂಗ್ರೆಸ್ಸಿನ ಪ್ರಮುಖ ಹಾಗೂ ಪ್ರಭಾವಿ ವಕೀಲರುಗಳನ್ನು ಹಾಗೂ ನಾಯಕರುಗಳನ್ನು ತನ್ನ ಪಕ್ಷಕ್ಕೆ ಸೆಳೆಯಲು ಶತಾಯಗತಾಯ ಪ್ರಯತ್ನಿಸುತ್ತಿದೆ.
ರಾಜ್ಯದ ಚುನಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುವ ಲಿಂಗಾಯತ ಮತದಾರರನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚಿಸಿಕೊಳ್ಳಲು ಸಾಕಷ್ಟು ಲಿಂಗಾಯತ ಸಮಾಜದ ಪ್ರಭಾವಿ ಹಾಗೂ ನಿಷ್ಠಾವಂತ ನಾಯಕರುಗಳನ್ನು ತನ್ನ ಪಕ್ಷಕ್ಕೆ ಸೆಳೆಯಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ ಮತ್ತು ಅವರುಗಳನ್ನು ಸೆಳೆಯಲು ಎಲ್ಲ ಹಂತದಲ್ಲೂ ಯತ್ನಿಸುತ್ತಿದೆ. ಲಿಂಗಾಯತ ಸಮಾಜದ ಪ್ರಭಾವಿ ವ್ಯಕ್ತಿ, ಕಾಂಗ್ರೆಸ್ ವಕ್ತಾರ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ಸಂಕೇತ ಏಣಗಿ ಯವರನ್ನು ಬಿಜೆಪಿಗೆ ಸೆಳೆಯಲು ಗಾಳ ಹಾಕಲು ಬಿಜೆಪಿಯ ಹಿರಿಯ ಲಿಂಗಾಯತ ನಾಯಕರುಗಳು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಿ, ಆ ಮೂಲಕ ಪ್ರಯತ್ನಿಸಿದ್ದಾರೆ ಅನ್ನೋದು ಸದ್ಯ ಎರಡೂ ಪಾರ್ಟಿಗಳಲ್ಲಿ ಚರ್ಚೆಯಾಗ್ತಿರೋ ವಿಷಯ.
ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚೆಗೆ ಲಿಂಗಾಯತ ಸಮಾಜದ ಅಸಮಾಧಾನದ ಅಲೆ ಭುಗಿಲೆದ್ದಿದ್ದು ಇದನ್ನ ಬಿಜೆಪಿ ಬಳಸಿಕೊಳ್ಳಲು ಮುಂದಾಗಿರೋದು ಅಚ್ಚರಿ ಏನಿಲ್ಲ. ಇದ್ರಿಂದ ಸಂಕೇತ್ ಏಣಿಗಿ ಕೂಡ ಮನಸು ಬದಲಿಸಿ ಬಿಜೆಪಿಗೆ ಸೇರ್ಪಡೆಯಾದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ ರಾಜಕೀಯ ಪಂಡಿತರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರುಗಳನ್ನು ಕಡೆಗಣಿಸಿ ರಾಜ್ಯದಿಂದ ರಾಜ್ಯಸಭೆಗೆ ಕಾಂಗ್ರೆಸ್ಸಿನ ಜೈರಾಮ್ ರಮೇಶ್ ಅವರ ಹೆಸರನ್ನು ಕಾಂಗ್ರೆಸ್ಸಿನ ಹೈಕಮಾಂಡ್ ಸೂಚಿಸಿರುವುದು ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಭಿನ್ನಮತಕ್ಕೆ ಅಡಿಪಾಯ ಹಾಕಿ ಪಕ್ಷದ ರಾಜ ನಾಯಕರುಗಳಲ್ಲಿ ಸಾಕಷ್ಟು ಇರಿಸುಮುರಿಸು ಉಂಟುಮಾಡಿದೆ. ರಾಜ್ಯ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಘಟಕದ ಪ್ರಮುಖ ನಾಯಕಿ ಕವಿತಾರೆಡ್ಡಿ ಕೂಡ ಇತ್ತೀಚೆಗೆ ಕಾಂಗ್ರೆಸ್ ಪಕ್ಷನಲ್ಲಿಯ ಮಹಿಳಾ ಮೀಸಲಾತಿ ವಿಚಾರದಲ್ಲಿಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
PublicNext
30/05/2022 01:21 pm