ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ನೇತೃತ್ವ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮುಂದಿನ ಚುನಾವಣೆ ಎದುರಿಸಲಿದ್ದು, 150 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತಿ ಹೆಚ್ಚು ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದರು.
ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಲಿಸ್ಟ್ ಮಾಡಲು ಪುರುಸೊತ್ತಿಲ್ಲದಷ್ಟು ಮುಖಂಡರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರುವುದು ಖಚಿತ ಎಂದು ತಿಳಿಸಿದರು.
ಭಾರತದಲ್ಲಿರುವ ಸುಮಾರು 60 ಶೇಕಡಾದಷ್ಟು ಯುವಕರು ಜಗತ್ತಿನ ಭವಿಷ್ಯವನ್ನೇ ರೂಪಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಸ್ವಾತಂತ್ರ್ಯಾನಂತರ ಭಾರತ ರಾಮರಾಜ್ಯ ಆಗಬೇಕೆಂಬ ಆಶಯ ಮಹಾತ್ಮ ಗಾಂಧಿ ಅವರದಾಗಿತ್ತು. ವ್ಯಕ್ತಿ ನಿರ್ಮಾಣ, ಸಂಕಲ್ಪ, ಗುರಿ ನೀಡುವ ಕಾರ್ಯ ಆಗಬೇಕು. ಇದರಿಂದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದಿದ್ದರು. ಅದೇ ಪರಿಕಲ್ಪನೆಯಡಿ ಬಿಜೆಪಿ ಮುಂದುವರಿಯುತ್ತಿದೆ ಎಂದು ತಿಳಿಸಿದರು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
PublicNext
08/05/2022 05:10 pm