ಬೆಳಗಾವಿ: ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು, ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ 2,500 ಕೋಟಿ ರೂ. ಸಿದ್ಧವಿಟ್ಟುಕೊಳ್ಳಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿದೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ರಾಮದುರ್ಗದಲ್ಲಿ ನಿನ್ನೆ (ಗುರುವಾರ) ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, "ನಾನು ರೊಕ್ಕ ಬಿಚ್ಚುವುದಿಲ್ಲ, ಆದರೂ ಮಂದಿ ಮತ ಹಾಕ್ತಾರೆ. ಅವನು ಏನಿದ್ದರೂ ಮುಂದೆ ಒದರ್ತಾನ್ರಿ, ಬೆನ್ನಾಗ ಚಾಕು ಹಾಕಲ್ಲ ಅಂತಾರೆ. ನಾನು ಯಾರಿಗೂ ಕಿರಿಕಿರಿ ಮಾಡುವವನಲ್ಲ. ವಿಜಯಪುರದಲ್ಲಿ ಎಂತಹ ಕ್ಷೇತ್ರದಲ್ಲಿ ಆರಿಸಿ ಬಂದಿದ್ದೇನೆ? ಹೆಚ್ಚೂ ಕಡಿಮೆ ಪಾಕಿಸ್ತಾನ ಇದ್ದಂತೆಯೇ ಇದೆ. ಅಲ್ಲಿ ಆರಿಸಿ ಬಂದಿದ್ದೇನೆ. ಏಕೆಂದರೆ ಅವರದ್ದು (ಮುಸ್ಲಿಮರದ್ದು) ಲಕ್ಷ ಮತವಿದ್ದರೆ, ನಮ್ದು ಒಂದೂವರೆ ಲಕ್ಷ ಮತಗಳಿವೆ. ನಮ್ಮ ಮಂದಿ ಹೊರಗೆ ಬರುತ್ತಿರಲಿಲ್ಲ. ಹೊರಗೆ ಬಾರದಿದ್ದರೆ ಪಾಕಿಸ್ತಾನ ಆಗುತ್ತೆ ನೋಡಿ ಎಂದೆ, ಆಗ ಬಂದು ಮತ ಹಾಕಿದರು" ಎಂದಿದ್ದಾರೆ.
PublicNext
06/05/2022 03:44 pm