ಚನ್ನಪಟ್ಟಣ: ಇಡೀ ದೇಶದ ಗಮನ ಸೆಳೆದಿರುವ ಪಿಎಸ್‌ಐ ಪರೀಕ್ಷೆ ಅಕ್ರಮ ಪೊಲೀಸ್ ಇಲಾಖೆಯಿಂದಲೇ ಬಯಲಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಅವರು; “ಈ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಕೊಲೆ ನಂತರ ನಡೆದ ಬೆಳವಣಿಗೆಗಳಿಗೂ ಈ ಪರೀಕ್ಷೆ ಅಕ್ರಮ ಬಯಲಾಗುವುದಕ್ಕೂ ಲಿಂಕ್ ಇದೆ” ಎಂದರು.
ಚಂದ್ರು ಎಂಬ ಯುವಕನ ಕೊಲೆ ಪ್ರಕರಣದ ವಿಚಾರವಾಗಿ ನಡೆದ ಬೆಳವಣಿಗೆಗಳೇ ಪರೀಕ್ಷೆ ಅಕ್ರಮವನ್ನು ಬಯಲಿಗೆಳೆದಿವೆ. ಬಿಜೆಪಿಯ ವಕ್ತಾರರೊಬ್ಬರು ಪೊಲೀಸ್ ಆಯುಕ್ತ ಕಮಲ್ ಪಂಥ್ ವಿರುದ್ಧವೇ ಆರೋಪ ಮಾಡಿದ್ದರು. ಆ ಕೊಲೆಯ ವಿಚಾರವಾಗಿ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆಂದು ಅವರು ದೂರಿದ್ದರು.
ಪರಸ್ಪರ ದ್ವಿಚಕ್ರ ವಾಹನ ಡಿಕ್ಕಿ ಕಾರಣಕ್ಕೆ ಗಲಾಟೆ ನಡೆದು ಯುವಕನ ಕೊಲೆಯಾಗಿತ್ತು ಎಂದು ಪೊಲೀಸರು ಹೇಳಿದ್ದರು. ಆದರೆ, ಬಿಜೆಪಿ ನಾಯಕರು ಹಠಕ್ಕೆ ಬಿದ್ದವರಂತೆ ಉರ್ದು ಭಾಷೆ ಮಾತನಾಡಲು ಬರಲಿಲ್ಲ ಎನ್ನುವ ಕಾರಣಕ್ಕೆ ಗಲಾಟೆಯಾಗಿ ಯುವಕನ ಕೊಲೆಯಾಯಿತು ಎಂದು ಕಥೆ ಕಟ್ಟಿದ್ದರು. ಅದು ಅಲ್ಲಿಂದ ಪಿಎಸ್‌ಐ ಪರೀಕ್ಷೆ ಅಕ್ರಮದವರೆಗೂ ಬಂದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
PublicNext
04/05/2022 02:28 pm