ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ವೇಳೆಯಲ್ಲೇ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಹಲವು ಮಾರ್ಮಿಕ ಪ್ರಶ್ನೆಗಳನ್ನು ಕೇಳಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ಪ್ರಕಾಶ್ ನಡ್ಡಾ ಅವರನ್ನು ಕಡೆಗಣಿಸಲು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ಆರೋಪಿಸಿದೆ.
ಇನ್ನು ಅಮಿತ್ ಶಾ, ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಳಿನ್‌ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿರುವ ಫೋಟೋ ಹಂಚಿಕೊಂಡ ಕಾಂಗ್ರೆಸ್ ಪ್ರಶ್ನೆಯೊಂದನ್ನು ಎತ್ತಿದೆ.
ಪ್ರತಿ ಸರ್ಕಾರಿ ನೇಮಕಾತಿಯಲ್ಲಿ, ಪ್ರತಿ ಸರ್ಕಾರಿ ವರ್ಗಾವಣೆಯಲ್ಲಿ, ಪ್ರತಿ ಸರ್ಕಾರಿ ಗುತ್ತಿಗೆಯಲ್ಲಿ 40% ಕಮಿಷನ್ ಪಡೆದು, ಇಡೀ ರಾಜ್ಯವನ್ನು ಲೂಟಿ ಮಾಡಿ ರಾಜ್ಯದ ಸಂಪನ್ಮೂಲಗಳನ್ನು ಗುಡಿಸಿ ಗುಂಡಾಂತರ ಮಾಡಿದ ಆದಾಯದಲ್ಲಿ ಬೆಳ್ಳಿ ತಟ್ಟೆಯಲ್ಲಿ ಭೋಜನ ಸವಿಯುವವರಿಗೆ ಭಾರತ ಹಸಿವಿನ ಸೂಚ್ಯಂಕದಲ್ಲಿ 117ನೇ ಸ್ಥಾನಕ್ಕೆ ಕುಸಿದಿರುವುದು ಕಾಣೋದು ಹೇಗೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಇನ್ನೊಂದು ಟ್ವೀಟ್‌ನಲ್ಲಿ 'ಕೇಂದ್ರ ಗೃಹ ಸಚಿವರ ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡೋದಿಕ್ಕಲ್ಲ. ಬದಲಾಗಿ ಜೆ.ಪಿ ನಡ್ಡಾ ಅವರನ್ನು ಸೈಡ್‌ಲೈನ್ ಮಾಡೋದಿಕ್ಕೆ. ಕೇಂದ್ರ ಸರ್ಕಾರದ ಪ್ರತಿನಿದಿಯಾಗಿ ಆಗಮಿಸಿ ಆಗುಹೋಗುಗಳನ್ನು ಚರ್ಚಿಸುವ ಬದಲು ಪಕ್ಷದ ಸಭೆ ಮಾಡ್ತಿದ್ದಾರೆ. ಅಮಿತ್ ಶಾ ಭೇಟಿಯಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ' ಎಂದು ಕೆಪಿಸಿಸಿ ಹೇಳಿದೆ.
PublicNext
04/05/2022 11:18 am