ದಾವಣಗೆರೆ: ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಅದರಲ್ಲಿ ತಪ್ಪೇನಿಲ್ಲ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳದ್ದೇ ಪರಮಾಧಿಕಾರ. ಈ ಬಗ್ಗೆ ಪಕ್ಷದ ಕೇಂದ್ರದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಜಗಳೂರು ಪಟ್ಟಣದಲ್ಲಿ ಮಾತನಾಡಿದ ಅವರು, ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ. ಎಸ್. ಈಶ್ವರಪ್ಪ ಅವರು ಆರೋಪ ಮುಕ್ತರಾಗಿ ಹೊರ ಬರುತ್ತಾರೆ. ಸಂತೋಷ್ ಪಾಟೀಲ್ ಸಾವಿನ ಸಂಬಂಧ ತನಿಖೆ ನಡೆಯುತ್ತಿದೆ. ಕಾರ್ಯಾದೇಶ ಇಲ್ಲದೇ ಗುತ್ತಿಗೆದಾರರು ಹೇಗೆ ಕಾರ್ಯನಿರ್ವಹಿಸಿದರು ಎಂಬುದು ಮುಖ್ಯವಾಗುತ್ತದೆ. ಆರ್ಡರ್ ಇಲ್ಲದೇ ಕೆಲಸ ಮಾಡಿದರೆ ಯಾರು ಹೊಣೆ? ನಿರ್ದಿಷ್ಟವಾಗಿ ದಾಖಲೆ ಸಮೇತ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಲಿ. ವಿರೋಧ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ಸಂಬಂಧ ಯಾರೇ ಆರೋಪಿಗಳಿದ್ದರೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ನಮ್ಮ ಪಕ್ಷದವರು ಸೇರಿದಂತೆ ಯಾವುದೇ ಪಕ್ಷದವರು ಈ ಹಗರಣದಲ್ಲಿ ಭಾಗಿಯಾಗಿದ್ದರೆ ಖಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹುಬ್ಬಳ್ಳಿ ಗಲಭೆಕೋರರಿಗೆ ಶಾಸಕ ಜಮೀರ್ ಅಹಮದ್ ಅವರು ನೆರವು ನೀಡಿದ್ದು ಸರಿಯಲ್ಲ. ಗಲಭೆಕೋರರಿಗೆ ನೆರವು ನೀಡಿದರೆ ಅವರಿಗೆ ಶೋಭೆ ತರುವುದಿಲ್ಲ. ಸಮಾಜದಲ್ಲಿ ಅಶಾಂತಿ ಉಂಟುಮಾಡುವವರಿಗೆ ಯಾರೂ ನೆರವು ನೀಡಬಾರದು ಎಂದು ಹೇಳಿದರು.
PublicNext
29/04/2022 03:28 pm