ಬೆಂಗಳೂರು: ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹಿಂದಿ ಹೇರಿಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು “ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ. ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ. ಇದು ನಮ್ಮ ಜೀವದ ಉಸಿರು ಎಂದಿದ್ದಾರೆ.
ಇಂಗ್ಲೀಷ್, ಹಿಂದಿ ಎಲ್ಲ ಭಾಷೆಗಳ ಬಗ್ಗೆ ನಮಗೆ ಗೌರವ ಇದೆ, ಇವೆಲ್ಲವೂ ಬೇಕು. ಈ ಭಾಷೆಗಳ ಮೂಲಕ ಹರಿದು ಬರುವ ಜ್ಞಾನದ ಅಮೃತವೂ ಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ, ಮಾತೃಭಾಷೆಗೆ ಮೊದಲ ಪೂಜೆ. ನಮ್ಮದು ಒಕ್ಕೂಟ ವ್ಯವಸ್ಥೆಯ ದೇಶ. ರಾಜ್ಯಗಳು ಭಾಷೆಯ ಆಧಾರದಲ್ಲಿ ರಚನೆಯಾಗಿವೆ. ಭಾಷಾವಾರು ಪ್ರಾಂತದಲ್ಲಿ ಪ್ರಾದೇಶಿಕ ಭಾಷೆಯನ್ನು ಮನ್ನಿಸಬೇಕಾಗುತ್ತದೆ. ಕನ್ನಡ ನಮಗೆ ಮಾತೃಭಾಷೆಯೂ ಹೌದು, ಪರಿಸರದ ಭಾಷೆ ಕೂಡಾ ಎಂದು ತಿಳಿಸಿದ್ದಾರೆ. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪ್ರತಿಯೊಂದು ರಾಜ್ಯಭಾಷೆಯೂ ನಮ್ಮ ರಾಷ್ಟ್ರಭಾಷೆ, ನೆಲದ ಸಾರ್ವಭೌಮ ಭಾಷೆ. ಇದನ್ನೂ ಸಂವಿಧಾನವೂ ಅಂಗೀಕರಿಸಿದೆ. ಸಂವಿಧಾನವನ್ನೇ ವಿರೋಧಿಸುವ ದೇಶದ್ರೋಹಿಗಳಿಗೆ ಈ ಸಾಮಾನ್ಯ ಜ್ಞಾನದ ಅರಿವಿರಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
'ಒಮ್ಮಿಂದೊಮ್ಮೆಲೇ ಬಿಜೆಪಿಯ ರಾಷ್ಟ್ರ-ರಾಜ್ಯ ನಾಯಕರೆಲ್ಲರೂ ಗುಂಪು ಕಟ್ಟಿಕೊಂಡು ಕನ್ನಡವನ್ನು ಧಿಕ್ಕರಿಸಿ ಹಿಂದಿ ಭಾಷೆಯನ್ನು ತಲೆಮೇಲೆ ಹೊತ್ತು ಮೆರವಣಿಗೆ ಮಾಡಲು ಹೊರಟಿರುವುದನ್ನು 'ಸಾಂಸ್ಕೃತಿಕ ಭಯೋತ್ಪಾದನೆ' ಎನ್ನದೆ ಬೇರೇನು ಹೇಳಲು ಸಾಧ್ಯ?' 'ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ನಾನು ರಾಜಕೀಯ ಜೀವನ ಪ್ರಾರಂಭಿಸಿದವನು. ನಾನು ಇಂದು, ಮುಂದು, ಎಂದೆಂದೂ ಒಬ್ಬ ಕನ್ನಡದ ಕಾವಲುಗಾರ. ಕಳ್ಳರ ಜೊತೆ ಶಾಮೀಲಾಗುವ ಡೋಂಗಿ ಚೌಕಿದಾರ ಅಲ್ಲ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ ಖಾರವಾಗಿ ಕುಟುಕಿದ್ದಾರೆ.
PublicNext
29/04/2022 02:27 pm