ದಾವಣಗೆರೆ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಯಾವುದೇ ಬಾಂಬು ಇಲ್ಲ, ಏನೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಡಿಯೋದಲ್ಲಿ ಯಾರ್ಯಾರು ಆರೋಪಿಗಳು ಮಾತಾಡಿದ್ದಾರೆ, ಏನು ಮಾತನಾಡಿದ್ದಾರೆ ಎಂಬ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುತ್ತೇವೆ. ಸಿಐಡಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಪಕ್ಷ ನೋಡದೆ ಯಾರೇ ಇದ್ದರೂ ಕ್ರಮ ನಿಶ್ಚಿತ ಎಂದು ತಿಳಿಸಿದರು.
ವಿಶೇಷವಾಗಿ ಪರೀಕ್ಷಾ ಕೇಂದ್ರ, ಸೂಪರ್ ವೈಸರ್ ಮತ್ತು ಅಭ್ಯರ್ಥಿಗಳು, ಮೇಲುಸ್ತುವಾರಿ ಸೇರಿದಂತೆ ಎಲ್ಲ ಆಯಾಮದಲ್ಲಿಯೂ ಈ ಬಗ್ಗೆ ತನಿಖೆ ನಡೆಯುತ್ತದೆ ಎಂದರು.
ಬೆಂಗಳೂರಿನ ಆರು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಯಾಯ್ಯಾವ ದೇಶದಿಂದ ಯಾರು ಕರೆ ಮಾಡಿದ್ದಾರೆ ಎಂಬುದನ್ನ ಪತ್ತೆ ಮಾಡುತ್ತೇವೆ. ಆ ಬಗ್ಗೆ ಇ-ಮೇಲ್ ಎಲ್ಲವು ಇವೆ. ಇದನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಈ ಹಿಂದೆ ಕ್ರಮಕೈಗೊಂಡಂತೆ ಈಗಲೂ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ವರಿಷ್ಠರ ಜೊತೆ ಚರ್ಚೆ ನಂತರ ನನಗೂ ಮಾಹಿತಿ ಸಿಗುತ್ತೆ ಎಂದ ಅವರು ಮಾಹಿತಿ ಆಯೋಗದ ಆಯುಕ್ತರ ನೇಮಕದಲ್ಲಿ ಹಗರಣ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡದೆ ಸಿಎಂ ಬಸವರಾಜ್ ಬೊಮ್ಮಾಯಿ ತೆರಳಿದರು.
PublicNext
23/04/2022 07:21 pm