ರಾಮನಗರ: ಲಂಚ-ಮಂಚ ಕೇಸ್‌ನಲ್ಲಿ ನಾನು ಜೈಲಿಗ ಹೋಗಿಲ್ಲ ಬದಲಾಗಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ ಕಾರಣಕ್ಕೆ ನನ್ನನ್ನು ಚಿತಾವಣೆ ಮಾಡಿ ಜೈಲಿಗೆ ಕಳುಹಿಸಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಮನಗರದ ಪೊಲೀಸ್ ಭವನದ ಎದುರಿನ ವೃತ್ತದಲ್ಲಿ ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈಗಲ್ ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದೆ. ಇದಕ್ಕೆ ಪ್ರತೀಕಾರವಾಗಿ ನನ್ನನ್ನು ಜೈಲಿಗೆ ಕಳುಹಿಸಿದರು. ತಾವು ಈಗಲ್ಟನ್ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ತಮ್ಮ ಕೊಠಡಿಯ ಮೇಲೆ ದಾಳಿ ನಡೆಯಿತು.
ನಮ್ಮ ನಾಯಕರ ಮನೆಗಳ ಮೇಲೂ ದಾಳಿ ಆಯಿತು. ಸಿಕ್ಕಪಟ್ಟೆ ತೊಂದರೆ ಕೊಟ್ಟಿದ್ದಾರೆ. ಮುಂದೆ ನಿಮಗೂ ಕಾದಿದೆ ಎಂದು ಎಚ್ಚರಿಕೆ ನೀಡಿದರು. ನಾನು ಸಚಿವನಾಗಿದ್ದಾಗ ಯಾರ ಬಳಿಯೂ ಲಂಚ ಪಡೆದಿಲ್ಲ. ಯಾರಾದರೂ ಒಬ್ಬರು ನಾನು ಲಂಚ ಪಡೆದಿದ್ದೇನೆ ಎಂದು ಹೇಳಲಿ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದ ಡಿಕೆಶಿ ಸವಾಲು ಹಾಕಿದ್ದಾರೆ. ಬಿಜೆಪಿ ಆಡಳಿತದಲ್ಲಿ ಲಂಚ ಕೊಡುವವರೆಗೂ ಕಡತ ವಿಲೇವಾರಿ ಆಗುವುದಿಲ್ಲ. ಗುತ್ತಿಗೆದಾರ ಸಂತೋಷ ಪಾಟೀಲ್ ವಿಚಾರದಲ್ಲಿ ಕೂಡ ಇದೇ ಆಗಿದೆ. ಸರ್ಕಾರದ ಪ್ರತಿ ಕಚೇರಿಯ ಗೋಡೆಯೂ ಕಾಸು ಕೇಳುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದಾರೆ.
PublicNext
18/04/2022 10:17 am