ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ಥಾನಕ್ಕೆ ಅಸಮರ್ಥರು. ಜೆ.ಜೆ ನಗರ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಬಿಜೆಪಿ ಹಿಂದೂಗಳನ್ನ ಪ್ರವೋಕ್ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡೋಕ್ಕೆ ಇವರಿಗೆ ಆಗುತ್ತಿಲ್ಲ. ಹೀಗೆ ಆದ್ರೆ ರಾಜ್ಯ ಬೆಳವಣಿಗೆ ಆಗಲ್ಲ. ಇವರ ಸ್ವಾರ್ಥಕ್ಕೋಸ್ಕರ, ಮತಕೋಸ್ಕರ ಈ ರೀತಿ ಮಾಡುತ್ತಿದ್ದಾರೆ. ದೇಶವನ್ನ ಹಾಳು ಮಾಡಲು ಹೊರಟಿದ್ದಾರೆ. ಕೊಲೆಯಾದ ಹರ್ಷನ ಕುಟುಂಬಸ್ಥರಿಗೆ ೨೫ ಲಕ್ಷ ಕೊಟ್ಟಿದ್ದಾರೆ. ಆದ್ರೆ ದಿನೇಶ್ ಕುಟುಂಬಸ್ಥರಿಗೆ ಯಾಕೆ ಕೊಟ್ಟಿಲ್ಲ? ಇವರ ಕೈನಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಆಗುತ್ತಿಲ್ಲ. ಹಿಜಾಬ್, ಹಲಾಲ್, ಭಗವದ್ಗೀತೆ, ವ್ಯಾಪಾರ, ಮಾವಿನ ಹಣ್ಣು, ದ್ವನಿವರ್ಧಕ ಹೀಗೆ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇದೆಲ್ಲ ಜನರಿಗೆ ಅರ್ಥವಾಗಿದೆ, ಜನರೇ ತಿರುಗಿ ಬೀಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸರಿ ಇದ್ದಲ್ಲಿ ಮಾತ್ರ ಕೈಗಾರಿಕೆಗಳು ಉಳಿಯುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
PublicNext
10/04/2022 05:54 pm