ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಬೇಕಾದ ನೀವು ಅದರ ಬದಲಾಗಿ ಹಲಾಲ್ ಕಟ್, ಜಟ್ಕಾ ಕಟ್ ಬಗ್ಗೆ ಹೋರಾಟ ಮಾಡ್ತಿದ್ದೀರಿ. ನಿಮ್ಮ ಕೆಲಸ ಇದೇನಾ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜನರ ಶಾಂತಿ ನೆಮ್ಮದಿ ನನಗೆ ಬೇಕಾಗಿರುವುದು. ಯಾರನ್ನು ಮೆಚ್ಚಿಸಲು ನಾನು ಮಾತನಾಡುತ್ತಿಲ್ಲ. ನಾಡಿನ ಸಾಮರಸ್ಯ ಕದಡಲು ಜನರು ಅವಕಾಶ ನೀಡಬಾರದು. ಬಜರಂಗದಳ, ಆರ್‌ಎಸ್ಎಸ್, ವಿಎಚ್‌ಪಿಗೆ ಈ ದೇಶದ ಬಗ್ಗೆ ಅಭಿಮಾನ ಇದ್ದರೆ ಬೆಲೆ ಏರಿಕೆ ವಿರುದ್ಧ ಕೇಸರಿ ಶಾಲು ಧರಿಸಿ ಹೋರಾಟ ಮಾಡಲಿ. ನಿಮ್ಮ ಜೊತೆ ನಾವೂ ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಸವಾಲು ಹಾಕಿದರು.
ಬೆಲೆ ಏರಿಕೆ ವಿರುದ್ಧ ಮೆರವಣಿಗೆ ಮಾಡಲು ಅವಕಾಶ ಕೊಡುತ್ತಿಲ್ಲ. ನ್ಯಾಯಾಲಯ ಆದೇಶ ಇದೆ ಎಂದು ಮೆರವಣಿಗೆಗೆ ಅವಕಾಶ ಕೊಡುತ್ತಿಲ್ಲ ಎನ್ನುತ್ತಾರೆ. ಬಿಜೆಪಿ ಶೋಭಾಯಾತ್ರೆಗೆ ಅನುಮತಿ ಇದೆ. ಆದರೆ ಬಡವರ ಪರ ಹೋರಾಟಕ್ಕೆ ಏಕಿಲ್ಲ ಎಂದು ಕಿಡಿಕಾರಿದರು. ಮೋಹನ್ ದಾಸ್ ಪೈ ಅವರು ಬೆಂಗಳೂರಿನಲ್ಲಿ ಸರಿಯಾದ ಮೂಲಭೂತ ಸೌಕರ್ಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸರ್ಕಾರದಲ್ಲಿ ಹೈಕೋರ್ಟ್ ಹಾಗೂ ಮೋದಿ ಕೆಲಸ ಮಾಡಲು ಸೂಚನೆ ಕೊಡಬೇಕಾದಂತಹ ಪರಿಸ್ಥಿತಿ ಇದೆ. ಗೃಹ ಸಚಿವರು ಟೋಪಿ ಹಾಕಿದಾಗ ಒಂದು ಹೇಳಿಕೆ ಕೊಡುತ್ತಾರೆ. ಟೋಪಿ ತೆಗೆದಾಗ ಒಂದು ಹೇಳಿಕೆ ಕೊಡುತ್ತಾರೆ ಎಂದು ಆರಗ ಜ್ಞಾನೇಂದ್ರ ವಿರುದ್ಧ ಕೆಂಡಕಾರಿದರು.
PublicNext
08/04/2022 05:57 pm