ನವದೆಹಲಿ: 1988ರ ನಂತರ ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದ ಸಂಖ್ಯೆ 100ರ ಗಡಿ ದಾಟಿದೆ. ರಾಜ್ಯಸಭೆಗೆ ಗುರುವಾರ ನಡೆದ ಚುನಾವಣೆಗಳ ಬಳಿಕ ಬಿಜೆಪಿ ಸದಸ್ಯರ ಸಂಖ್ಯೆ 101 ತಲುಪಿರುವುದು ಪಕ್ಷ ದೇಶಾದ್ಯಂತ ವಿಸ್ತಾರಗೊಂಡಿರುವುದಕ್ಕೆ ಸಾಕ್ಷಿಯಾಗಿದೆ.
ಮುಂಬರುವ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೂ ಈ ಅಂಕಿ ಸಂಖ್ಯೆಗಳು ಪಕ್ಷಕ್ಕೆ ದೊಡ್ಡ ಮಟ್ಟಿನಲ್ಲಿ ನೆರವಾಗಲಿದೆ. ಜೊತೆಗೆ ಪ್ರಮುಖ ವಿಧೇಯಕಗಳ ಅನುಮೋದನೆ ಹಾದಿಯೂ ಸುಗಮವಾಗಲಿದೆ.
ಗುರುವಾರ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಒಂದು ರಾಜ್ಯಸಭಾ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈಶಾನ್ಯದ ಅಸ್ಸಾಂ, ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ನಾಲ್ಕು ರಾಜ್ಯಸಭಾ ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
PublicNext
03/04/2022 10:23 am