ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಹಿಂದೂ ಸಂಘಟನೆಗಳ ವಿರುದ್ದದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಇದಕ್ಕೆ ಕರ್ನಾಟಕ ಬಿಜೆಪಿ, ಕುಮಾರಸ್ವಾಮಿ ಮೇಲೆ ಪ್ರತಿದಾಳಿ ನಡೆಸಿದೆ. ಸಾಂದರ್ಭಿಕ ಕೂಸೊಂದು ಹಿಂದುತ್ವದ ಪಾಠ ಮಾಡ್ತಿದೆ ಎಂದೆಲ್ಲ ಸರಣಿ ಟ್ವೀಟ್ ಮೂಲಕ ಎಚ್‌ಡಿಕೆಗೆ ತಿರುಗೇಟು ನೀಡಿದೆ.
'ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್‌ಡಿಕೆ ಸರ್ಕಸ್ ಮಾಡುತ್ತಿದ್ದಾರೆ. ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರ ಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ. ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ' ಎಂದು ರಾಜ್ಯ ಬಿಜೆಪಿ ಕುಮಾರಸ್ವಾಮಿ ಮೇಲೆ ಕಿಡಿ ಕಾರಿದೆ.
'ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ. ಕುಮಾಸ್ವಾಮಿ ಅವರು ಅದೃಷ್ಟಕ್ಕೆ ಸಿಎಂ ಆದವರು. ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತು ನೆನಪಿಸಿಕೊಳ್ಳಿ. ನಿಮ್ಮ ಜಾತ್ಯತೀತ ನಡೆ ಎಂಬುದು ಅವಕಾಶವಾದದ ಪರಿಷ್ಕೃತ ರೂಪ. ಅಧಿಕಾರ ಅನುಭವಿಸಲು ಏನೂ ಬೇಕಾದರೂ ಮಾಡಲು ಸಿದ್ದವಾಗಿರುವವರು ನೀವು. ನಿಮ್ಮಿಂದ ಯಾವ ವ್ಯಕ್ತಿಯೂ, ಯಾವ ಸಂಘಟನೆಯೂ ಪಾಠ ಕಲಿಯಬೇಕಾಗಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ವರಸೆ' ಎಂದು ರಾಜ್ಯ ಬಿಜೆಪಿ ಖಾರವಾಗಿ ಹೇಳಿದೆ.
'ಯಾವ ವಿಚಾರದಲ್ಲಿ ತನ್ನ ಮತಬ್ಯಾಂಕ್ ಗಟ್ಟಿಯಾಗುತ್ತದೋ ಆ ವಿಚಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಜಾಯಮಾನ. ಕುಮಾರಸ್ವಾಮಿ ಅವರೇ, ಗಂಡಸ್ತನದ ಬಗ್ಗೆ ಮಾತನಾಡುವುದರಲ್ಲಿ "ಪುರುಷಾರ್ಥ" ಅಡಗಿದೆಯೇ?' ಎಂದು ಕುಮಾರಸ್ವಾಮಿ ಅವರಿಗೆ ಬಿಜೆಪಿ ತೀಕ್ಷ್ಣವಾಗಿ ಪ್ರಶ್ನೆ ಮಾಡಿದೆ.
PublicNext
02/04/2022 10:40 pm