ತುಮಕೂರು: ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನ ಎಂದು ಈಗಾಗಲೇ ಸರ್ಕಾರ ಆಚರಿಸುತ್ತಿದೆ. ಮಧ್ಯಾಹ್ನದ ಬಿಸಿ ಊಟದ ಯೋಜನೆಗೆ ಡಾ: ಶ್ರೀ ಶಿವಕುಮಾರರ ಹೆಸರಿಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ಡಾ: ಶ್ರೀ ಶಿವಕುಮಾರ ಸ್ಬಾಮೀಜಿಗಳ 115ನೇ ಜಯಂತೋತ್ಸವ ಹಾಗೂ “ಗುರುವಂದನಾ ಮಹೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.
ಬಸವಣ್ಣನವರ ದಾಸೋಹ, ಶಿಕ್ಷಣ, ಆರೋಗ್ಯ ತತ್ವಗಳಿಗೆ ನಮ್ಮ ಸರ್ಕಾರ ಮಹತ್ವ ನೀಡಿದೆ. ಸರ್ವೋದಯ ಕಾರ್ಯಕ್ರಮಕ್ಕೆ 60 ಸಾವಿರ ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಿದೆ. ಜನಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ.
ಬಡವರು ದೀನದಲಿತರು, ಹೆಣ್ಣು ಮಕ್ಕಳಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಕೇಂದ್ರ ಸಚಿವರ ಆಗಮನ ನಮ್ಮಲ್ಲಿ ಸಂಚಲನ ಮೂಡಿಸಿದೆ. ಜನರು ಅವರ ಮೇಲೆ ಪ್ರೀತಿ ಇರಿಸಿದ್ದಾರೆ.
ಶಿವಕುಮಾರ ಸ್ವಾಮೀಜಿಗಳ ಸ್ಪೂರ್ತಿ:
ಈ ನೆಲದಲ್ಲಿ ಅವರ ಸ್ಫೂರ್ತಿ, ಪ್ರೇರಣೆ ಇದೆ. ಇಲ್ಲಿ ಬಂದರೆ ಮನಸ್ಸಿಗೆ ಶಾಂತಿ, ಬದುಕಿಗೆ ದಾರಿ ಸಿಗುವ ಶಕ್ತಿ ಸಿದ್ದಗಂಗಾ ಕ್ಷೇತ್ರದಲ್ಲಿ ಇದೆ. ಅದೇ ದಾರಿಯಲ್ಲಿ ಸಿದ್ದಲಿಂಗಸ್ವಾಮಿಗಳು ಹಿಂದಿನ ಪರಂಪರೆಯನ್ನು ಅತ್ಯಂತ ಪ್ರಾಮಾಣಿಕವಾಗಿ ದಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ ಎಂದರು.
ಅನನ್ಯ ಸೇವೆಯ ದಾಖಲೆ:
ಶಿವಕುಮಾರ ಸ್ವಾಮೀಜಿ ಅವರು ಸುಮಾರು 88 ವರ್ಷಗಳ ಕಾಲ ಈ ನಾಡಿನ ಸೇವೆಯನ್ನು ಮಠದ ಮುಖಾಂತರ ಮಾಡಿರುವುದು ಒಂದು ದಾಖಲೆ. ಯಾವುದೇ ಪರ ಪೂಜ್ಯರು ಇಷ್ಟು ದೀರ್ಘಕಾಲದ ಸೇವೆಯನ್ನು ಇಡೀ ಭಾರತ ದೇಶದಲ್ಲಿ ಮಾಡಿಲ್ಲ ಎನ್ನುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ. ಅದಕ್ಕಾಗಿಯೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ಬಂದಿದೆ. ಅವರು ಹಚ್ಚಿದ ಒಲೆಯ ಕಿಚ್ಚು ಸುಮಾರು 100 ವರ್ಷಕ್ಕಿಂತ ಹೆಚ್ಚಿನದಾಗಿದ್ದು, ಇಂದಿಗೂ ಉರಿಯುತ್ತಿದೆ. ಎಲ್ಲಿಯವರೆಗೆ ಈ ಅಡಿಗೆ ಒಲೆಯ ಕಿಚ್ಚು ಉರಿಯುತ್ತಿರುತ್ತದೆ, ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆ ತಣ್ಣಗಾಗುತ್ತದೆ ಎಂದರು.
ನಾವೆಲ್ಲರೂ ಕೋಟಿ ಕೋಟಿ ಗುರುವಂದನೆಗಳನ್ನು ಸದಾ ಸಲ್ಲಿಸಬೇಕು. ಅನ್ನ, ಅಕ್ಷರ, ಆಶ್ರಯಗಳನ್ನು ಅಕ್ಷರಶಃ ಪಾಲಿಸಿದ ದೇವರು ಶಿವಕುಮಾರ ಸ್ವಾಮೀಜಿ ಅವರು. ಅವರು ನಮ್ಮ ನಡುವೆ ಜೀವಂತವಾಗಿದ್ದು, ಪ್ರೇರಣೆ, ಆಶೀರ್ವಾದ ನೀಡುತ್ತಿದ್ದಾರೆ ಎಂದರು ಸಿಎಂ ಬಸವರಾಜ್ ಬೊಮ್ಮಾಯಿ.
ಸುರೇಶ್ ಬಾಬು..Public Next ತುಮಕೂರು
PublicNext
01/04/2022 04:17 pm