ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕುಚೋದ್ಯತನದ ಹೇಳಿಕೆಗಳು ಇತ್ತೀಚೆಗೆ ಕಾಂಗ್ರೆಸ್ಸಿಗಂತೂ ಹೆಜ್ಜೆ ಹೆಜ್ಜೆಗೂ ಮುಜುಗರವನ್ನುಂಟು ಮಾಡುತ್ತಿದೆ. ಅವರ ಹೇಳಿಕೆ ಇತ್ತ ಸಮರ್ಥಿಸುವಂತಿಲ್ಲ, ಅತ್ತ ವಿರೋಧಿಸುವಂತಿಲ್ಲ.
ಸಮರ್ಥಿಸಿದರೆ ಹಿಂದೂ ಮತದಾರರ ಕೈ ಬಿಡುತ್ತಾನೆ, ವಿರೋಧಿಸಿದರೆ ಮುಸ್ಲಿಂ ಓಟ್ ಬ್ಯಾಂಕ್ ಉಡಿಸ್.
ಶತಾಯ ಗತಾಯ ರಾಜ್ಯದಲ್ಲಿ ಕಾಂಗ್ರಸ್ಸನ್ನು ಮತ್ತೇ ಅಧಿಕಾರಕ್ಕೆ ತರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಗಲಿರುಳು ಹೋರಾಡುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಹಾಗೂ ಇನ್ನಿತರ ಹೋರಾಟದ ಮೂಲಕ ಪಕ್ಷದ ಬುನಾದಿ ಮತ್ತಷ್ಟು ಬಲಪಡಿಸಲು ಹೆಣಗುತ್ತಿದ್ದರೆ ಸಿದ್ದರಾಮಯ್ಯ ಬೆಳಗಾಗುವುದರಲ್ಲಿ ಯಾವುದೋ ಒಂದು ವಿವಾದ ಸೃಷ್ಟಿಸಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಧರ್ಮವೆಂಬ ಜೇನುಗೂಡಿಗೆ ಕೊಳ್ಳಿ ಇಡುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದವನ್ನೂ ಕಾಂಗ್ರೆಸ್ ಮೈಮೇಲೆ ಎಳೆದುಕೊಂಡು ಸಾಕಷ್ಟು ಪೆಟ್ಟು ತಿಂದಿತ್ತು. ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕದ ಸಮಾರಂಭವೊಂದರಲ್ಲಿ ಅಭಿಮಾನಿ ತೊಡಿಸಲು ಬಂದ ಕೇಸರಿ ಪೇಟವನ್ನು ತೆಗೆದು ಬೀಸಾಕಿ ವಿವಾವದಕ್ಕೀಡಾಗಿದ್ದರು ಇದೇ ಸಿದ್ದರಾಮಯ್ಯ.
ಕಾಂಗ್ರೆಸ್ಸಿಗನಾಗಿ ಸಿದ್ದರಾಮಯ್ಯನವರು ಹಿಜಾಬ್ ಬೆಂಬಲಿಸುವುದರಲ್ಲಿ ತಪ್ಪಿಲ್ಲ ಆದರೆ, ಅದೇ ಕಾಲಕ್ಕೆ ಹಿಂದೂ ಸಮಾಜದ ಆಚರಣೆ, ಮಠಾಧೀಶರು ಹಾಗೂ ಸ್ವಾಮಿಜಿಗಳ ವಸ್ತ್ರ ಧಾರಣೆ, ಹಿಂದೂ ಮಹಿಳೆಯರ ಬಟ್ಟೆ ತೊಡುವ ಶೈಲಿಯನ್ನು ಹಿಜಾಬ್ ಗೆ ಹೋಲಿಸಿ ಮಾತನಾಡುತ್ತಿರುವುದು ಆಘಾತಕಾರಿ.
ಹಿಜಾಬ್ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ಎಂದು ಸಮರ್ಥಿಸಿಕೊಳ್ಳುವ ಭರದಲ್ಲಿ ಸಿದ್ದರಾಮಯ್ಯ, ‘ ಜೈನ್ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳುವುದಿಲ್ಲವೇ? ಸ್ವಾಮೀಜಿಗಳು ತಲೆಗೆ ಕೇಸರಿ ಬಟ್ಟೆ ಸುತ್ತಿಕೊಳ್ಳುವುದಿಲ್ಲವೆ ಎಂದು ಪ್ರಶ್ನಿಸಿ ತಮ್ಮ ತುಲನಾತ್ಮಕ ಪಾಂಡಿತ್ಯ ಮರೆದಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವಲ್ಲಿಯೂ ಬಿಜೆಪಿ ನಾಯಕರು ಹಿಂದೆ ಬಿದ್ದಿಲ್ಲ. ಇದು
ಮಠಾಧೀಶರ ಸಮೂಹಕ್ಕೆ ಮಾಡಿದ ಅವಮಾನ. ಹಿಂದೂ ಧರ್ಮ, ಸಂಸ್ಕೃತಿಯನ್ನು ಹೀಯಾಳಿಸುವುದು ಸಿದ್ದರಾಮಯ್ಯ ಅವರ ಚಟ’ ಎಂದು ಅವರವರ ಭಾವಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ್ದಾರೆ.
ಹಿಜಾಬ್ ವಿವಾದದಲ್ಲಿ ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಎಳೆದಿರುವುದಕ್ಕೆ ಕಾಂಗ್ರೆಸ್ ವಲಯದಲ್ಲಿಯೇ ಅಸಮಾಧಾನ ಹೊಗೆಯಾಡ ತೊಡಗಿದೆ.
‘ಸಿದ್ದರಾಮಯ್ಯ ಮಠಾಧೀಶರ ಸಮೂಹವನ್ನೇ ಅವಮಾನಿಸಿದ್ದಾರೆ. ಅವರು ಕೂಡಲೇ ಮಠಾಧೀಶರ ಕ್ಷಮೆ ಕೋರಬೇಕು. ಹಿಂದೂ ಧರ್ಮ, ಸಂಸ್ಕೃತಿಯನ್ನು ಹೀಯಾಳಿಸುವುದು ಸಿದ್ದರಾಮಯ್ಯ ಅವರ ಚಟ’ ಎಂದು ಪಂಚ ಪೀಠಾಧಿಪತಿಗಳು ಸೇರಿದಂತ ರಾಜ್ಯಾದ್ಯಂತ ಸ್ವಾಮೀಜಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೆ ಪದೆ ವಿವಾದ ಸೃಷ್ಟಿಸುವ ಹೇಳಿಕೆ ನೀಡುವುದು, ಹಿಂದೂ ಸಮಾಜ ಹಾಗೂ ಸ್ವಾಮಿಗಳ ವಿರುದ್ಧ ಟೀಕೆ ಮಾಡುವುದನ್ನು ನೋಡಿದರೆ ಸಿದ್ದರಾಮಯ್ಯ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ದ ಸಂಚು ರೂಪಿಸುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗ ತೊಡಗಿದೆ ಎನ್ನುತ್ತಾರೆ ಡಿಕೆಶಿ ಬೆಂಬಲಿಗರು.
ಮುಖ್ಯಮಂತ್ರಿ ಕುರ್ಚಿಗಾಗಿ ಇವರಿಬ್ಬರ ಮಧ್ಯ ಈಗಾಗಲೇ ಕುಸ್ತಿ ಆರಂಭವಾಗಿರುವುದು ಗುಟ್ಟಾಗಿ ಉಳಿದಿಲ್ಲ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಕಾಂಗ್ರೆಸ್ ನಾಯಕರು ಹೀಗೆ ಹೆಜ್ಜೆ ಹೆಜ್ಜೆಗೆ ವಿವಾದ ಹುಟ್ಟು ಹಾಕಿ ಬಹು ಸಂಖ್ಯಾತ ಹಿಂದೂಗಳ ವಿರೋಧ ಕಟ್ಟಿಕೊಳ್ಳುವುದು ರಾಜಕೀಯ ಜಾಣತನವಲ್ಲ.
PublicNext
26/03/2022 01:15 pm