ಮೈಸೂರು: ಹಿಂದೂ ಹೆಣ್ಮಕ್ಕಳು ತಲೆ ಮೇಲೆ ಬಟ್ಟೆ ಹಾಕಲ್ವಾ? ಇದನ್ನೂ ಪ್ರಶ್ನಿಸ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ ಕೊಂಚ ತಣ್ಣಗಾಗಿದ್ದ ಹಿಜಾಬ್ ವಿವಾದವನ್ನು ಮತ್ತೆ ಕೆದಕಿದ್ದಾರೆ.
ಸಿದ್ದರಾಮನ ಹುಂಡಿಯಲ್ಲಿ ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, "ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ. ಮುಸ್ಲಿಂ ಹೆಣ್ಣು ಮಕ್ಕಳು ದುಪ್ಪಟ್ಟವನ್ನ ತಲೆಗೆ ಹಾಕಿಕೊಳ್ಳುತ್ತೇನೆ ಅಂದ್ರೆ ಅದರಲ್ಲಿ ತಪ್ಪೇನಿದೆ? ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನಿಸ್ತೀರಾ?" ಎಂದು ಕಿಡಿಕಾರಿದ್ದಾರೆ.
ಇಂತಹ ವಿವಾದ ಸೃಷ್ಟಿಸಿ ಅರಗಿಸಿಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ ಜನ ಬುದ್ಧಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ. ಸಂಘ ಪರಿವಾರದವರು ಅಲ್ಪಸಂಖ್ಯಾತರ ಕೊಲೆ ಮಾಡಿದರೆ ಮೃತರ ಕುಟುಂಬಕ್ಕೆ ಕಡಿಮೆ ಪರಿಹಾರ ಹಣ ಕೊಡುತ್ತಾರೆ. ಮುಸಲ್ಮಾನರು ಹಿಂದೂ ಯುವಕನ ಕೊಲೆ ಮಾಡಿದರೆ ಮೃತರ ಕುಟುಂಬಕ್ಕೆ ಜಾಸ್ತಿ ಪರಿಹಾರ ಕೊಡುತ್ತಾರೆ ಎಂದು ದೂರಿದರು.
ಶಿವಮೊಗ್ಗದ ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡ್ತಾರೆ. ಅದೇ ಕರಾವಳಿಯ ದಿನೇಶ್ ಕುಟುಂಬಕ್ಕೆ ಕೊಟ್ರಾ? ದುಡ್ಡು ಅಂದ್ರೆ ಇವರ ಅಪ್ಪನ ಮನೆಯದ್ದಾ? ಸಾರ್ವಜನಿಕರು ಬೆವರು ಸುರಿಸಿ ದುಡಿದು ಕಟ್ಟಿದ ತೆರಿಗೆ. ಇವರು ಯಾವಾಗಲೂ ಜನರಿಗೆ ಮಕ್ಮಲ್ ಟೋಪಿ ಹಾಕಬಹುದು ಅಂದುಕೊಂಡಿದ್ದಾರೆ. ಜನರಿಗೆ ಸತ್ಯ ಗೊತ್ತಾಗುತ್ತದೆ. ಇಂತಹ ವರ್ತನೆಯಿಂದ ಮತ ಕ್ರೂಢೀಕರಣ ಆಗುತ್ತೆ ಎಂಬ ಬಿಜೆಪಿ ಲೆಕ್ಕ ಉಲ್ಟಾ ಆಗುತ್ತೆ ನೋಡಿ ಎಂದು ಹೇಳಿದರು.
PublicNext
25/03/2022 01:47 pm