ಚನ್ನಪಟ್ಟಣ: ಚನ್ನಪಟ್ಟಣ ತಾಲೂಕಿನ ಅಭಿವೃದ್ಧಿಗೆ ನಾನು ಮುಖ್ಯಮಂತ್ರಿಗಳಿಂದ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೆ. ಆದರೆ ಮಂಜೂರಾಗಿದ್ದ ಅನುದಾನವನ್ನು ಶಾಸಕ ಕುಮಾರಸ್ವಾಮಿ ತಡೆಹಿಡಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.
ತಾಲೂಕಿನ ಎಚ್.ಮೊಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರವಾಗಿ ಕುಮಾರಸ್ವಾಮಿ ಸದಾ ಅಡ್ಡಗಾಲು ಹಾಕುತ್ತಿದ್ದಾರೆ. ಅವರು ಕ್ಷೇತ್ರಕ್ಕೆ ಬಂದಾಗಲೊಮ್ಮೆ ನನ್ನ ಬಗ್ಗೆ ಹಗುವಾಗಿ ಮಾತನಾಡುತ್ತಾರೆ. ನನ್ನ ಹಾಗೂ ಕುಮಾರಸ್ವಾಮಿ ನಡುವೆ ಆಗಾಗ ಅಭಿವೃದ್ಧಿ ವಿಚಾರದಲ್ಲಿ ಕಿತ್ತಾಟ ನಡೆಯುತ್ತಲೇ ಇದೆ. 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಇಬ್ಬರು, ರಾಮನಗರದಲ್ಲಿ ಇಬ್ಬರು ಗುತ್ತಿಗೆದಾರರನ್ನು ಬದುಕಿಸಿದ್ದು ಹೊರತು ಪಡಿಸಿದರೆ, ಈ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ, ಡಾಂಬರು ಕಿತ್ತು ಅದೇ ರಸ್ತೆಗೆ ಡಾಂಬರು ಹಾಕುವುದನ್ನೇ ಅಭಿವೃದ್ಧಿ ಎಂದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಚನ್ನಪಟ್ಟಣದಲ್ಲಿ ಗೋವಿಂದಹಳ್ಳಿ ನಾಗರಾಜು ಹಾಗೂ ಮತ್ತೊಬ್ಬ ಬೇನಾಮಿ ಗುತ್ತಿಗೆದಾರ ಎಲ್ಲಾ ಕೆಲಸಗಳನ್ನು ಮಾಡಿದರೆ, ರಾಮನಗರದಲ್ಲಿ ಪ್ರಕಾಶ್ ಹಾಗೂ ಇನ್ನೊಬ್ಬ ಬೇನಾಮಿ ಗುತ್ತಿಗೆದಾರ ಕೆಲಸಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
PublicNext
23/03/2022 10:43 am