ಬೆಂಗಳೂರು : ಸಚಿವ ಕೆ.ಎಸ್. ಈಶ್ವರಪ್ಪ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ನೀಡಿದ ಹೇಳಿಕೆ ವಿಧಾನಮಂಡಲದ ಅಧಿವೇಶನದಲ್ಲಿಂದು ಕೋಲಾಹಲವನ್ನು ಸೃಷ್ಟಿಸಿದೆ. ವಿಧಾನಸಭೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮಾತಿನ ಯುದ್ಧ ನಡೆದಿದೆ.
ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದ ಬೆನ್ನಲ್ಲೆಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ನೀನು ಬೇಲ್ ಮೇಲೆ ಇರೋನು, ಮತ್ತೆ ಯಾವಾಗ ಜೈಲಿಗೆ ಹೋಗ್ತೀಯೋ ಗೊತ್ತಿಲ್ಲ. ಲೂಟಿ ಮಾಡೋರೆಲ್ಲಾ ಬೇಲ್ ಮೇಲೆ ಹೊರಗೆ ಇದ್ದೀರಾ ಎಂದರು.
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಶ್ವರಪ್ಪ ಹೇಳಿಕೆಯ ಬಗ್ಗೆ ಅವರ ಅಭಿಪ್ರಾಯ ಕೇಳುತ್ತೇನೆ ಎಂದಾಗ, ದೇಶದ್ರೋಹ ಮಾಡಿದವರೊಂದಿಗೆ ಏನು ಉತ್ತರ ಕೇಳುತ್ತೀರಿ ಎಂದು ಡಿಕೆಶಿ ಪ್ರಶ್ನಿಸಿದರು. ಡಿಕೆಶಿ ಮಾತಿಗೆ ಈಶ್ವರಪ್ಪ ನೀನು ರಾಷ್ಟ್ರ ದ್ರೋಹಿ ಅವನು, ಜೈಲಿಗೆ ಹೋಗಿ ಬಂದವನು ನನಗೇನು ಹೇಳೋದು, ನೀನು ನನಗೆ ಹೇಳಬೇಡ ಎಂದು ಕಿಡಿಕಾರಿದರು.
ಡಿಕೆಶಿ ಮತ್ತು ಈಶ್ವರಪ್ಪ ಕೂಗಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್, ನೀವೆಲ್ಲ ಹಿರಿಯ ಸದಸ್ಯರು, ಏಕೆ ಹೀಗೆ ಆಡ್ತೀರಿ?. ನನಗೆ ಮನವರಿಕೆ ಆಗಬೇಕಲ್ಲವಾ? ನಿಮ್ಮನ್ನು ನೋಡಿದರೆ ಏನ್ ಮನವರಿಕೆ ಆಗುತ್ತೆ? ರೀ ಶಿವಕುಮಾರ್ ನೀವು ಹೇಗೆ ನಡೆದುಕೊಳ್ತಿದ್ದೀರಿ? ನೀವು ಒಂದು ಪಕ್ಷದ ಅಧ್ಯಕ್ಷರು ಎಂದು ಗರಂ ಆದರು.
PublicNext
16/02/2022 05:33 pm