ದಾವಣಗೆರೆ: ಹೊನ್ನಾಳಿಯಲ್ಲೂ ಹಿಜಾಬ್ ವಿಚಾರ ತಾರಕಕ್ಕೇರುವ ಲಕ್ಷಣ ಗೋಚರಿಸತೊಡಗಿದೆ.ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಬುರ್ಖಾ ಧರಿಸುವುದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ ಘಟನೆ ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ತರಗತಿಗಳಲ್ಲಿ ಬುರ್ಖಾ ಧರಿಸುವುದನ್ನ ನಿಷೇಧಿಸಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ಹೇಗಾದರೂ ಬರಲಿ, ತರಗತಿಯಲ್ಲಿ ಬುರ್ಖಾ ಧರಿಸಬಾರದು. ಈ ಬಗ್ಗೆ ನೀವು ಅವರಿಗೆ ಸೂಚನೆ ನೀಡದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ. ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ವಿದ್ಯಾರ್ಥಿಗಳ ಪಟ್ಟು ಹಿಡಿದರು.
ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಾಂಶುಪಾಲರು ಮುಂದಾದರೂ ಮನವೊಲಿಕೆಗೆ ವಿದ್ಯಾರ್ಥಿಗಳು ಬಗ್ಗಲಿಲ್ಲ. ತರಗತಿಯಲ್ಲಿ ಬುರ್ಖಾ ನಿಷೇಧಿಸಿ ಎಂದು ಪ್ರಾಂಶುಪಾಲರಿಗೆ ದೂರು ಸಲ್ಲಿಸಿದ್ದು, ದೂರಿನಲ್ಲಿ 50 ವಿದ್ಯಾರ್ಥಿಗಳು ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ. ದೂರಿನಲ್ಲಿ ಹಿಜಾಬ್ ಎಂದು ನಮೂದಿಸದ ವಿದ್ಯಾರ್ಥಿಗಳು, ಕೇವಲ ಬುರ್ಖಾ ನಿಷೇಧಿಸಿ ಎಂದು ಆಗ್ರಹಿಸಿದ್ದಾರೆ.
PublicNext
06/02/2022 03:11 pm