ಬೆಂಗಳೂರು: ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸದ್ಯ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಲು ಸಕಲ ಸಿದ್ಧತೆ ನಡೆಸಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಗೆಲ್ಲುವ ಕ್ಷೇತ್ರಗಳ ಹುಡುಕಾಟ ನಡೆಸುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದ ಅವರು ಬಾದಾಮಿಯಲ್ಲಿ ಕೇವಲ 1,696 ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಅವರು ಸುರಕ್ಷಿತ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಬಿ.ಬಿ.ಚಿಮ್ಮನಕಟ್ಟಿ ಬಾದಾಮಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ವಾಪಸ್ ಮೈಸೂರಿಗೆ ಹೋಗುವಂತೆ ಸಿದ್ದರಾಮಯ್ಯ ಅವರಿ ಸಲಹೆ ನೀಡಿದ್ದರು.
ಹೀಗಾಗಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿರುವ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಯೋಜನೆ ರೂಪಿಸುತ್ತಿದ್ದಾರೆ. ಇದರ ಜೊತೆಗೆ ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆಯಾದರೇ ಒಕ್ಕಲಿಗ ಮತಗಳು ಕೂಡ ತಮಗೆ ಲಭಿಸಲಿವೆ ಎಂಬ ಭರವಸೆಯಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ.
ಮೇಕೆದಾಟು ಪಾದಯಾತ್ರೆ ದೊಡ್ಡ ಮಟ್ಟದಲ್ಲಿ ನೆರವಾದ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರ ವಿಧಾನಸಭಾ ಕ್ಷೇತ್ರವನ್ನು ಹಾಗೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕದ ಸಂಭಾವ್ಯ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ಎಂ.ಬಿ ಪಾಟೀಲ್ ಅವರಿಗೆ ಬಬಲೇಶ್ವರ ಕ್ಷೇತ್ರದ ಬಗ್ಗೆ ಯಾವುದೇ ಅಸಮಾಧಾನವಿಲ್ಲ, ಅಲ್ಲಿ ಅವರು ಪ್ರಬಲ ಬೆಂಬಲಿಗರ ದಂಡೇ ಇದೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಕೊರಟಗೆರೆಯಲ್ಲಿ ತಮ್ಮ ಮತದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಅವರ ಎಸ್‌ಸಿ ಬಲ ಸಮುದಾಯದ ಮತಗಳು ಎಡ ಸಮುದಾಯಕ್ಕಿಂತ ದೊಡ್ಡದಾಗಿಲ್ಲ. ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಯಾರು ಹೇಳಬೇಡಿ. ಇದರಿಂದ ಒಳಸಂಚು ಶುರುವಾಗುತ್ತದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
PublicNext
25/01/2022 10:29 am