ಮುಂಬೈ: ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ 25 ವರ್ಷ ವ್ಯರ್ಥವಾಯಿತು. ಹೀಗಾಗಿ ಶಿವಸೇನೆ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಸೆದ ಸವಾಲನ್ನು ಸ್ವೀಕರಿಸಿರುವುದಾಗಿ ಭಾನುವಾರ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಪಕ್ಷದ ಸಂಸ್ಥಾಪಕ ಮತ್ತು ಅವರ ತಂದೆ ಬಾಳ್ ಠಾಕ್ರೆ ಅವರ 96ನೇ ಜನ್ಮದಿನದಂದು ಶಿವಸೇನೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಸೇನೆಯು ಬಿಜೆಪಿಯೊಂದಿಗೆ ಮಿತ್ರಪಕ್ಷವಾಗಿ ಕಳೆದ 25 ವರ್ಷಗಳನ್ನು ವ್ಯರ್ಥವಾಗಿ ಕಳೆದಿದೆ ಎನ್ನುವುದನ್ನು ನಾನು ಇನ್ನೂ ನಂಬುತ್ತೇನೆ. ಸೇನೆಯು ಮಹಾರಾಷ್ಟ್ರದ ಹೊರಗೆ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ. 'ಶಿವಸೇನೆ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಬೇಕು' ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಶಿವಸೇನೆ ಬಿಜೆಪಿಯನ್ನು ಬಿಟ್ಟಿದೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿಯ ಅವಕಾಶವಾದಿ ಹಿಂದುತ್ವ ಅಧಿಕಾರಕ್ಕಾಗಿ ಮಾತ್ರ ಎಂದು ನಾನು ನಂಬುತ್ತೇನೆ. ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಬಿಜೆಪಿ ಅವಕಾಶವಾದಿ ಮೈತ್ರಿ ಮಾಡಿಕೊಂಡಿದೆ. 'ಸಂಘ ಮುಕ್ತ' (ಆರ್‌ಎಸ್‌ಎಸ್ ಮುಕ್ತ) ಭಾರತ್ ಬಗ್ಗೆ ಮಾತನಾಡಿದ ನಿತೀಶ್ ಕುಮಾರ್ (ಬಿಹಾರದಲ್ಲಿ) ಜೊತೆ ಬಿಜೆಪಿ ಸಹ ಒಪ್ಪಂದ ಮಾಡಿಕೊಂಡಿದೆ ಎಂದು ಕುಟುಕಿದರು.
PublicNext
24/01/2022 07:32 am