ಬೆಂಗಳೂರು: ಈ ಸಲದ ಗಣರಾಜ್ಯೋತ್ಸವ ಮೆರಣಿಗೆಗೆ ಕೇರಳ ರಾಜ್ಯದಿಂದ ಕಳುಹಿಸಲಾಗಿದ್ದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ದೇಶದ ಶೋಷಿತ ಸಮಾಜಕ್ಕೆ ಹಾಗೂ ಸಮಾಜ ಸುಧಾರಕ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕೇಂದ್ರದ ನಡೆಯನ್ನು ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೂಡಲೇ ತನ್ನ ಈ ನಿರ್ಧಾರದಿಂದ ಹಿಂದೆ ಸರಿದು ತನ್ನ ತಪ್ಪಿಗೆ ಕ್ಷಮೆ ಕೋರಬೇಕು. ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಮೆರವಣಿಗೆಯಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.
ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ದೇಶದ ಬಹುತ್ವ ಪರಂಪರೆಯ ಸ್ತಬ್ಧಚಿತ್ರಗಳು ಪ್ರದರ್ಶಿತವಾಗುತ್ತವೆ. ದೇಶದ ಸಾಂಸ್ಕೃತಿಕ, ಧಾರ್ಮಿಕ ಐತಿಹಾಸಿಕ, ಅಭಿವೃದ್ಧಿ, ಮಿಲಿಟರಿ ವ್ಯವಸ್ಥೆ ಕುರಿತಾದ ಸ್ತಬ್ಧ ಚಿತ್ರಗಳು ಕೂಡ ಅಲ್ಲಿ ಪ್ರದರ್ಶಿತವಾಗುತ್ತವೆ. ಆದರೆ ಸಂಘ ಪರಿವಾರದ ನಿಯಂತ್ರಣದಲ್ಲಿರುವ ಕೇಂದ್ರ ಸರ್ಕಾರ ಕ್ರಾಂತಿಕಾರಿ ಸಮಾಜಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿದೆ. ಈ ಮೂಲಕ ಅಸಮಾನತೆ ಹಾಗೂ ಜಾತಿ ಪ್ರತಿಪಾದನೆಯನ್ನು ಪರೋಕ್ಷವಾಗಿ ಬೆಂಬಲಿಸಿದಂತಿದೆ ಎಂದು ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
PublicNext
16/01/2022 06:11 pm