ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ದಿನದಿಂದ ರಂಗು ಪಡೆಯುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗೆ ಎಸ್‌ಪಿ ಹಾಗೂ ಬಿಎಸ್‌ಪಿ ಬಿಗ್ ಫೈಟ್ ಕೊಡಲು ಚುನಾವಣಾ ರಣ ತಂತ್ರ ನಡೆಸಿವೆ. ಈ ನಡುವೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಿರತ್ ಜಿಲ್ಲೆಯ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಭಾರಿ ಗಮನ ಸೆಳೆದಿದ್ದು, ವಿವಾದವನ್ನೂ ಹುಟ್ಟಿಹಾಕಿದೆ.
ಬಿಕಿನ್ ಗರ್ಲ್ ಎಂದೇ ಖ್ಯಾತರಾಗಿರುವ ನಟಿ, ರೂಪದರ್ಶಿ ಅರ್ಚನಾ ಗೌತಮ್ ಅವರಿಗೆ ಹಸ್ತಿನಾಪುರ ವಿಧಾನಸಭಾ ಟಿಕೆಟ್ ನೀಡಲಾಗಿದೆ. ಇದೀಗ ಅವರ ಬಿಕಿನಿ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾಕಷ್ಟು ಹವಾ ಸೃಷ್ಟಿಸಿದ್ದಾರೆ.
ಈ ಪ್ರತಿಕ್ರಿಯೆ ನೀಡಿರುವ ಬಿಜೆಪಿ, 'ಕಾಂಗ್ರೆಸ್‌ಗೆ ಟಿಕೆಟ್ ನೀಡಲು ಯಾರೂ ಸಿಗದಿದ್ದಕ್ಕೆ ಬಿಕಿನಿ ಗರ್ಲ್ ಕರೆದುಕೊಂಡು ಬಂದು ಗಿಮಿಕ್ ಮಾಡುತ್ತಿದ್ದಾರೆ' ಎಂದು ವ್ಯಂಗ್ಯವಾಡಿದೆ. ಇನ್ನು ಕೆಲ ಹಿಂದುಪರ ಸಂಘಟನೆಗಳು, 'ಪುರಾಣ ಪ್ರಸಿದ್ಧ ಹಸ್ತಿನಾಪುರಕ್ಕೆ ಬಿಕಿನ್ ಗರ್ಲ್ ಕಳಿಸಿ ಹಿಂದುತ್ವಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ' ಎಂದು ಆರೋಪಿಸಿವೆ.
ಇದಕ್ಕೆ ಗರಂ ಆಗಿರುವ ಅರ್ಚನಾ ಗೌತಮ್, 'ರಾಜಕೀಯ ನನ್ನ ನೆಚ್ಚಿನ ಕ್ಷೇತ್ರ, ಮಾಡೆಲಿಂಗ್ ನನ್ನ ಹವ್ಯಾಸ. ರಾಜಕೀಯಕ್ಕೂ ಅದಕ್ಕೂ ತಳಕು ಹಾಕಿ ಮೋಜು ನೋಡುವುದು ಸರಿಯಲ್ಲ. ಅದು ಕೆಲವರ ಕೆಟ್ಟ ಮನಸ್ಥಿತಿ' ಎಂದು ಹೇಳಿದ್ದಾರೆ.
ಮಿರತ್ ಮೂಲದ 27 ವರ್ಷದ ಈ ಚೆಲುವೆ ಅರ್ಚನಾ ಕಳೆದೊಂದು ವರ್ಷದಿಂದ ಮಾಡೆಲಿಂಗ್ ಜೊತೆ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರು ಬಾಲಿವುಡ್‌ನ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಅವರು ಮಿಸ್ ಬಿಕಿನಿ ಇಂಡಿಯಾ 2018 ಸೌಂದರ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
PublicNext
15/01/2022 07:05 pm