ಲಖನೌ : 2022 ರಲ್ಲಿಯ ಪಂಚರಾಜ್ಯ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಈಗ ಅಕ್ಷರಶಃ ಕುರುಕ್ಷೇತ್ರವಾಗಿದೆ.
ವಿಧಾನಸಭೆಗೆ ಚುನಾವಣೆಗಳು ಘೋಷಣೆ ಆದ ಬೆನ್ನಲ್ಲಿಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು , ಮಂಗಳವಾರ ಒಂದೇ ದಿನ ಆಡಳಿತಾರೂಢ ಭಾರತೀಯ ಜನತಾಪಕ್ಷದ ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಹೌದು ಇಂದು ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ನಾಲ್ವರ ರಾಜೀನಾಮೆ ಯೋಗಿ ಸರ್ಕಾರಕ್ಕೆ ಬಿಸಿತುಪ್ಪವಾಗಿದೆ.
ಶಹಜಹಾನ್ ಪುರ ಶಾಸಕ ರೋಶನ್ ಲಾಲ್ ವರ್ಮ, ಬಂಡಾ ಶಾಸಕ ಬ್ರಿಜೇಶ್ ಪ್ರಜಾಪತಿ ಮತ್ತು ಕಾನ್ಪುರದ ಶಾಸಕ ಭಗವತಿ ಸಾಗರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ ಪಿಗೆ ಸೇರ್ಪಡೆಯಾಗಲಿರುವ ವ್ಯಕ್ತಿಗಳಾಗಿದ್ದಾರೆ. ಇದಕ್ಕೂ ಮುನ್ನ ಬಹ್ರೈಚ್ ಶಾಸಕಿ ಮಾಧುರಿ ವರ್ಮ, ಬಡಯುನ್ ಶಾಸಕ ರಾಧಾ ಕೃಷ್ಣ ಶರ್ಮ ಹಾಗೂ ಸಂತ ಕಬೀರ ನಗರ ಶಾಸಕ ದಿಗ್ವಿಜಯ್ ನಾರಾಯಣ್ ಚೌಬೆ ಬಿಜೆಪಿಯನ್ನು ತೊರೆದು ಎಸ್ ಪಿಗೆ ಸೇರ್ಪಡೆಯಾಗಿದ್ದರು.
ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯನ್ನು ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾದ ಕುರಿತು ಪ್ರತಿಕ್ರಿಯೆ ನೀಡಿರುವ, ಬಿಜೆಪಿ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್, ಮೌರ್ಯ ಅವರು "ಕಸ" ಎಂದು ಟೀಕೆ ಮಾಡಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ನೀಡಿದ್ದಾರೆ.
ದಲಿತರು, ಹಿಂದುಳಿದ ಜಾತಿಗಳು, ರೈತರು ಮತ್ತು ನಿರುದ್ಯೋಗಿ ಯುವಕರ ಅಭ್ಯುದಯಕ್ಕೆ ಆಡಳಿತಾರೂಢ ಬಿಜೆಪಿ ಗಮನ ಹರಿಸುತ್ತಿಲ್ಲ ಎಂದು ಯೋಗಿ ಸರ್ಕಾರದಲ್ಲಿ ಕಾರ್ಮಿಕ, ಉದ್ಯೋಗ, ಸಮನ್ವಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸ್ವಾಮಿ ಪ್ರಸಾದ್ ಮೌರ್ಯ ಆರೋಪ ಮಾಡಿದ್ದಾರೆ.
PublicNext
11/01/2022 08:57 pm