ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ, ಒಮಿಕ್ರಾನ್ ನಿಮ್ಮ ನೆಂಟ್ರಾ? ಪಾದಯಾತ್ರೆಗೆ ಹೊಂಟವ್ರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ?

ಪಬ್ಕಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ

ನೋಡಿ ವ್ಯವಸ್ಥೆಯ ಕ್ರೂರ ವ್ಯಂಗ್ಯ, ಕೊರೊನಾ ಕುಂಟು ನೆಪದಲ್ಲಿ ವೀಕೆಂಡ್ ಲಾಕ್ಡೌನ್, ನೈಟ್ ಕರ್ಫ್ಯೂ ಹೇರಿ ಜನ ಸಾಮಾನ್ಯರ ಜೀವ ಹಿಂಡಿ ಬಡ ಬಗ್ಗರ ಹೊಟ್ಟೆ ಹೊಡೆಯುತ್ತಿರುವ ಸರಕಾರಕ್ಕೆ ಧಿಕ್ಕಾರವಿರಲಿ.

ಕೊರೊನಾ, ಒಮಿಕ್ರಾನ್ ಹೆಸರೇಳಿ ಎರಡು ದಿನ ಅಂಗಡಿ ಮುಂಗಟ್ಟುಗಳಿಗೆ ಬೀಗ ಜಡಿಯುತ್ತೀರಿ. ರಾತ್ರಿ ಕರ್ಫ್ಯೂ ಹೇರುತ್ತೀರಿ. ಲಕ್ಷಾಂತರ ಜನರ ಹೊಟ್ಟೆ ತುಂಬಿಸುವ ಹೊಟೇಲುಗಳ ಶಟರ್ ಎಳೆಯುತ್ತೀರಿ, ಅದೇ ಉದ್ಯಮವನ್ನು ನಂಬಿರುವ ಸಾವಿರಾರು ಕಾರ್ಮಿಕರನ್ನು ಬೀದಿಗೆ ಹಾಕುತ್ತಿದ್ದೀರಲ್ಲಾ ನಿಮಗೇನಾದರೂ ಮಾನ ಮರ್ಯಾದ ಇದೆಯಾ?

ಎಲ್ಲ ನಿಯಮಗಳನ್ನು ಬುಡಕ್ಕೆ ಹಾಕಿಕೊಂಡು ನಿಮ್ಮ ನಿಮ್ಮ ರಾಜಕೀಯ ಚಟಕ್ಕಾಗಿ ಸಭೆ ಸಮಾರಂಭ ಮಾಡುತ್ತೀರಾ, ಅಧಿಕಾರದ ಹಪಾಹಪಿಗಾಗಿ ಪಾದಯಾತ್ರೆ ಮಾಡುತ್ತೀರಾ? ಏಕೆ ನಿವೇನಾದ್ರೂ ಕೊರೊನಾ ಒಮಿಕ್ರಾನ್ ನೆಂಟರಾ? ನಿಮಗೆ ಸೋಂಕು ಬರದೆ ಜನಸಾಮಾನ್ಯರಿಗೆ ಮಾತ್ರ ಬರುತ್ತಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ಏಕೆ ರಾಜ್ಯದ ಜನತೆ ಬದುಕಿನೊಡನೆ ಚಲ್ಲಾಟವಾಡುತ್ತಿದ್ದೀರಾ? ಆಸ್ಪತ್ರೆಯಲ್ಲಿ ದಾಖಲಾದವರಿಗೆ ಊಟ ಕೊಡಲು ಹೊರಟವರಿಗೆ, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಬಾಸುಂಡೆ ಬರುವಂತೆ ಪೊಲೀಸರು ಹೊಡೆಯುತ್ತಿದ್ದಾರೆ. ಆದರೆ ಪಾದಯಾತ್ರೆ ಹೆಸರಲ್ಲಿ ರಾಜಕೀಯ ಮಾಡುತ್ತಿರುವವರಿಗೆ ಅದೇ ಪೊಲೀಸರು ರಕ್ಷಣೆ ನೀಡುತ್ತಿದ್ದಾರಲ್ಲಾ ಇದೇ ಏನು ನಿಮ್ಮ ಆಡಳಿತ?

ಮೇಕೆದಾಟು ಹೆಸರಲ್ಲಿ ನೀವು ರಾಜಕೀಯ ಮಾಡುತ್ತಿದ್ದೀರೋ ಅಥವಾ ಸಿದ್ದರಾಮ್ಯ ಹಾಗೂ ಡಿ.ಕೆ ಶಿವಕುಮಾರ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ರಾಜ್ಯದ ಜನತೆ ಕೆರಳುವಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಸರಕಾರಕ್ಕೆ ಸಡ್ಡು ಹೊಡೆದು ಪಾದಯಾತ್ರೆ ಹೊರಟಿದ್ದಾರಲ್ಲಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ನಿಮಗಿದೆಯಾ ಅವರಿಗೆ ಯಾವ ದಂಡ ಹಾಕುತ್ತೀರಿ ಬೊಮ್ಮಾಯಿ ಅವರೆ?

" ದಮ್ ಇದ್ದರೆ ನಮ್ಮನ್ನು ಬಂಧಿಸಲಿ '' ಎಂದು ಶಿವಕುಮಾರ್ ತಮ್ಮ ಶೈಲಿಯಲ್ಲಿ ಸರಕಾರಕ್ಕೆ ಚಾಲೆಂಜ್ ಮಾಡಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ದಮ್ ಇಲ್ಲದ ಸರಕಾರ ಎಂದು ಒಪ್ಪಿಕೊಂಡಂತಾಗುತ್ತದೆ ಅಲ್ಲವೆ?

ಹೌದು ಅವರ ವಿರುದ್ಧ ನೀವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಸಿದ್ದರಾಮ್ಯ ಹಾಗೂ ಡಿ.ಕೆ ಶಿವಕುಮಾರ್ ಬಲ್ಲರು. ಅವರಿಗೂ ಬೇಕಾಗಿದ್ದು ಅದೇ. ಪಾದಯಾತ್ರೆ ನಡೆಯುವದಕ್ಕಿಂತ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಅದನ್ನೇ ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ಸಿಗರು ಪ್ಲ್ಯಾನ ಹಾಕಿದ್ದಾರೆ ಎಂಬುದು ಸರಕಾರಕ್ಕೂ ಗೊತ್ತು. ಹೀಗಾಗಿ ಮೌನವಾಗಿರುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರಬಹುದು.

ಆದರೆ ಇದು ರಾಜ್ಯದ ಜನತೆಗೆ ಮಾಡಿದ ದ್ರೋಹವಲ್ಲವೆ? ವಾರಾಂತ್ಯದಲ್ಲಿ ಪುಟಿದೇಳಬೇಕಾದ ವ್ಯಾಪಾರ ವಹಿವಾಟಿಗೆ ಕಲ್ಲು ಹಾಕಿದ್ದೀರಿ. ಹೇಳಿ ಯಾವುದಾದರೂ ಚಟುವಟಿಕೆ ನಿಂತಿದೆಯಾ? ಅನಗತ್ಯವಾಗಿ ಮಾಲ್, ಬಟ್ಟೆ ಅಂಗಡಿ, ದೊಡ್ಡ ದೊಡ್ಡ ಶೋರೂಂಗಳನ್ನು ಬಂದ್ ಮಾಡಿ ನೀವು ಸಾಧಿಸಿದ್ದಾದರೂ ಏನು?

ಮಾಡುವುದಾದರೆ ಹಿಂದಿನಂತೆ ಎಲ್ಲವನ್ನೂ ಸ್ತಬ್ಧಗೊಳಿಸಬೇಕಾಗಿತ್ತು. ಅಂದರೆ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕಿಕೊಂಡು ಬಡವರು ಮಲಗುತ್ತಿದ್ದರು. ಆದರೆ ಈಗ ಎಲ್ಲರನ್ನೂ ಒಡಾಡಲು ಬಿಟ್ಟು, ರಾಜಕೀಯ ಯಾತ್ರೆ ಪಾದಯಾತ್ರೆಗಳಿಗೆ ಅವಕಾಶ ನೀಡಿ ಕೇವಲ ವ್ಯಾಪಾರ ವಹಿವಾಟನ್ನು ಬಂದ್ ಮಾಡಿದ್ದೀರಿ ಇದು ಯಾವ ನಿಯಮ?

ನಿಮ್ಮ ಇಬ್ಬಗೆಯ ನಿಯಮದಿಂದ ವಾಣಿಜ್ಯೋದ್ಯಮ ಅಪಾರ ನಷ್ಟ ಅನುಭವಿಸುವುದಲ್ಲದೆ ತೆರಿಗೆ ರೂಪದಲ್ಲಿ ಸರಕಾರಕ್ಕೆ ಬರುವ ಆದಾಯಕ್ಕೂ ಕೋಟ್ಯಂತರ ರೂ ಹೊಡೆತ ಎಂಬುದನ್ನು ಮರೆಯಬಾರದು.

ಬಿಜೆಪಿ ಅವರೂ ಕಡಿಮೇ ಏನಿಲ್ಲ, ಕೆಲವೇ ದಿನಗಳ ಹಿಂದೆ ನಿಯಮಾವಳಿ ಗಾಳಿಗೆ ತೂರಿ ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿ ಸಮಾವೇಶ ಮಾಡಿದ್ದಾರೆ. ನೀವೇ ನಿಯಮ ಉಲ್ಲಂಘಿಸಿರುವಾಗ ಇನ್ನು ಕಾಂಗ್ರೆಸ್ಸಿಗರಿಗೆ ಹೇಳಲು ನಿಮಗ್ಯಾವ ಹಕ್ಕಿದೆ?

Edited By :
PublicNext

PublicNext

09/01/2022 12:53 pm

Cinque Terre

39.48 K

Cinque Terre

18

ಸಂಬಂಧಿತ ಸುದ್ದಿ