ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಪಂಚರಾಜ್ಯ (ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ್)ಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.
ಈ ಸಂಬಂಧ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ಐದು ರಾಜ್ಯಗಳಲ್ಲಿ 18.34 ಕೋಟಿ ಮತದಾರರಿದ್ದು, 8.55 ಕೋಟಿ ಮಹಿಳೆಯರಿದ್ದಾರೆ. ಇನ್ನು 24.9 ಲಕ್ಷ ಜನರು ಮೊದಲ ಬಾರಿ ಮತ ಚಲಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯೂ 7 ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10ನೇ ತಾರೀಕಿನಿಂದ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಹಾಗೆಯೇ ಮಾರ್ಚ್ 10ನೇ ತಾರೀಕು ಫಲಿತಾಂಶ ಹೊರ ಬೀಳಲಿದೆ ಎಂದು ತಿಳಿಸಿದೆ.
ಉತ್ತರ ಪ್ರದೇಶ ಫೆಬ್ರವರಿ 10ನೇ ತಾರೀಕಿನಿಂದ ಮೊದಲ ಹಂತ, 14ನೇ ತಾರೀಕಿನಿಂದ 2ನೇ ಹಂತ, 20ಕ್ಕೆ ಮೂರನೇ ಹಂತ, 23ಕ್ಕೆ ನಾಲ್ಕನೇ ಹಂತ, 27ಕ್ಕೆ ಐದನೇ ಹಂತ, ಆರನೇ ಹಂತ ಮಾರ್ಚ್ 3 ಮತ್ತು ಎಳನೇ ಹಂತ ಮಾರ್ಚ್ 7ಕ್ಕೆ ಮತದಾನ ನಡೆಯಲಿದೆ. ಗೋವಾ, ಉತ್ತರಾಖಂಡ್ ಮತ್ತು ಪಂಜಾಬ್ಗೆ ಎರಡನೇ ಹಂತದ ಮತದಾನ ಫೆ.14ನೇ ತಾರೀಕು ನಡೆಯಲಿದೆ.
ಕೊರೊನಾ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸುತ್ತೇವೆ. ಮತಗಟ್ಟೆಗಳನ್ನು ಗ್ರೌಂಡ್ ಫ್ಲೋರ್‌ನಲ್ಲಿ ಸ್ಥಾಪಿಸಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. 5 ರಾಜ್ಯಗಳಲ್ಲಿ 2,15,368 ಮತಗಟ್ಟೆ ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ 1,250 ಜನ ಮತ ಚಲಾಯಿಸಬಹುದು. 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.
ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿದೆ.
ಮತದಾನ ಅವಧಿ 1 ಗಂಟೆ ವಿಸ್ತರಿಸಲಾಗುವುದು. ರಾಜಕೀಯ ಪಕ್ಷಗಳು ವರ್ಚುವಲ್ ರಾಲಿ ಮಾಡಲು ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ. ಪಾದಯಾತ್ರೆ, ರೋಡ್‌ಶೋ, ರಾಲಿಗಳಿಗೆ, ಸಾರ್ವಜನಿಕ ಸಭೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಸಭೆಗಳಿಗೆ ಜನವರಿ 15ರವರೆಗೆ ನಿರ್ಬಂಧ ಇರಲಿದೆ. ಗೆಲುವಿನ ಬಳಿಕ ಸಾರ್ವಜನಿಕ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಮನೆ ಮನೆ ಪ್ರಚಾರಕ್ಕೆ ಐವರು ಮಾತ್ರ ತೆರಳಲು ಅವಕಾಶ ಇರಲಿದೆ. ರಾತ್ರಿ 8 ಗಂಟೆ ಬಳಿಕ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹಾಕಲಾಗಿದೆ. ದ್ವೇಷದ ಭಾಷಣ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
PublicNext
08/01/2022 04:21 pm