ಡೆಹ್ರಾಡೂನ್: ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವೊಂದರಲ್ಲಿ ಯುವಕನೊಬ್ಬ ಚಾಕು ಹಿಡಿದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರತ್ತ ಧಾವಿಸಿದ ಆತಂಕಕಾರಿ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಉಸ್ತುವಾರಿ ಹರೀಶ್ ರಾವತ್ ಅವರು ಗುರುವಾರ ಕಾಂಗ್ರೆಸ್ ಸದಸ್ಯತ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಧಮ್ ಸಿಂಗ್ ನಗರದ ಕಾಶಿಪುರಕ್ಕೆ ಬಂದಿದ್ದರು. ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ರಾವತ್ ವೇದಿಕೆಯಿಂದ ಕೆಳಗಿಳಿಯಲಾರಂಭಿಸಿದರು. ಅಷ್ಟರಲ್ಲಿ ಯುವಕನೊಬ್ಬ ಏಕಾಏಕಿ ಸ್ಟೇಜ್ ಮೇಲೆ ಏರಿ ಚಾಕು ಬೀಸುತ್ತಾ ಮೈಕ್ ತೆಗೆದುಕೊಂಡು ಮೈದಾನದಲ್ಲಿದ್ದವರಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಕೂಗಾಡಿದ್ದಾನೆ. ಘೋಷಣೆ ಕೂಗದಿದ್ದಲ್ಲಿ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಘಟನೆ ಸಭೆಯಲ್ಲಿ ಆತಂಕಕ್ಕೆ ಕಾರಣವಾಯಿತು. ವೇದಿಕೆಯಲ್ಲಿದ್ದ ಜನರು ಹೇಗೋ ಯುವಕನನ್ನು ಹಿಡಿದು ಆತನ ಕೈಯಿಂದ ಚಾಕು ಕಿತ್ತುಕೊಂಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗದೆ. ಅಷ್ಟರಲ್ಲೇ ಆತಕ ಕೈ ಬಿಡಿಸಿಕೊಂಡು ಪರಾರಿಯಾಗಿದ್ದಾನೆ. ರಾವತ್ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಇದರ ಅರಿವೇ ಇಲ್ಲದಿರುವುದು ಭಾರಿ ಟೀಕೆ ಹಾಗೂ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
PublicNext
07/01/2022 04:13 pm