ಬೆಂಗಳೂರು: 'ನನ್ನ ಪ್ರಾಣ ಹೋದರೂ ಸರಿ, ರಾಜ್ಯದ ಜನರ ಕುಡಿಯುವ ನೀರಿಗಾಗಿ ಮಾಡುತ್ತಿರುವ ಮೇಕೆದಾಟು ನಡಿಗೆಯನ್ನು ಮಾಡಿಯೇ ತೀರುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುನರುಚ್ಛರಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿಕೆ ಶಿವಕುಮಾರ್, 'ಸರ್ಕಾರ ಪಾದಯಾತ್ರೆ ಮೊಟಕುಗೊಳಿಸಲು ಷಡ್ಯಂತ್ರ ರೂಪಿಸುತ್ತಿದ್ದು, ಬಿಜೆಪಿ ಸರ್ಕಾರ ಕೀಳು ರಾಜಕೀಯಕ್ಕಾಗಿ ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರ ಉತ್ಪ್ರೇಕ್ಷೆಯಿಂದ ಕೋವಿಡ್ ಸಂಖ್ಯೆ ಹೆಚ್ಚಳ ಮಾಡಿ, ರಾಜ್ಯದಲ್ಲಿ ನಿರ್ಬಂಧ ಹೇರಿದೆ. ಕುಡಿಯುವ ನೀರಿಗಾಗಿ ನಡೆಯುವ ಪಾದಯಾತ್ರೆಗೆ ಸಿಗುತ್ತಿರುವ ವ್ಯಾಪಕ ಬೆಂಬಲ ಸಹಿಸಲಾಗದೇ, ಚುನಾವಣೆಯಲ್ಲಿನ ಸೋಲು ಅರಗಿಸಿಕೊಳ್ಳಲು ಆಗದೇ ನಮ್ಮ ಯಾತ್ರೆ ತಡೆಯಲು ಸಂಚು ರೂಪಿಸಿದ್ದಾರೆ ಎಂದರು.
ಸರ್ಕಾರ ಯಾರನ್ನಾದರೂ ಬಂಧಿಸಲಿ, ಏನಾದರೂ ಮಾಡಿಕೊಳ್ಳಲಿ. ನಿಮಗೆ ಕಾನೂನು, ಸಂವಿಧಾನ, ಪ್ರಜಾಪ್ರಭುತ್ವದ ಹಕ್ಕುಗಳು, ಹೋರಾಟದ ಮೇಲೆ ಗೌರವಿಲ್ಲ. ನಿಮಗೆ ನೀತಿ, ಸಂಸ್ಕೃತಿ ಇಲ್ಲ. ನಾವು ನಡೆಯುತ್ತೇವೆ. ಯಾರೂ ಇಲ್ಲದಿದ್ದರೂ ನಾವಿಬ್ಬರೇ ನಡೆಯುತ್ತೇವೆ. ನಾವು ರಾಜ್ಯದ ಎಲ್ಲ ಸಂಘ ಸಂಸ್ಥೆಗಳಿಗೆ, ಧರ್ಮಗುರುಗಳಿಗೆ, ಪಕ್ಷದ ನಾಯಕರಿಗೆ, ವರ್ಗದವರಿಗೆ ಪಕ್ಷಾತೀತವಾಗಿ ಆಹ್ವಾನ ನೀಡಿದ್ದೇವೆ. ನೀವು ಕೇವಲ ಒಂದು ದಿನ ಮಾತ್ರ ಬಂಧಿಸಬಹುದು. ಮರುದಿನ ಅದು ನಿಮ್ಮಿಂದ ಸಾಧ್ಯವಿಲ್ಲ. ನೀವು ಬಂಧಿಸಿದರೂ ನಾವು ಹೆದರುವುದಿಲ್ಲ. ಮರುದಿನ ಕರ್ಫ್ಯೂ ಇಲ್ಲ, ನೀವು ಎಲ್ಲಿ ನಿಲ್ಲಿಸಿರುತ್ತೀರೋ ಅಲ್ಲಿಂದಲೇ ನಡೆಯುತ್ತೇನೆ. ನನ್ನ ಮನೆ, ನನ್ನ ಊರು, ನನ್ನ ಕ್ಷೇತ್ರ, ನನ್ನ ರಾಜ್ಯ. ಯಾರೂ ಈ ಪಾದಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
PublicNext
06/01/2022 10:17 pm