ಧಾರವಾಡ: ಸಿಎಂ ಬದಲಾವಣೆ ವಿಚಾರ ಅದೊಂದು ಊಹಾಪೋಹ ಅಷ್ಟೇ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಬೊಮ್ಮಾಯಿ ನಮ್ಮ ಶಾಸಕಾಂಗದ ನಾಯಕರು, ನಮ್ಮ ನಾಯಕರು ಅಂತಾ ಒಪ್ಪಿದ್ದೇವೆ. ಅವರು ಹೇಗೆ ಬದಲಾಗುತ್ತಾರೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರನ್ನು ಅಮಿತ್ ಷಾ, ನಡ್ಡಾ ಹಾಗೂ ಎಲ್ಲ ನಾಯಕರೂ ಒಪ್ಪಿದ್ದಾರೆ. ಬದಲಾವಣೆ ಅನ್ನೋದು ಮಾಧ್ಯಮದಲ್ಲಿ ಮಾತ್ರ ಕೇಳಿದ್ದೇವೆ. ಪಕ್ಷದಲ್ಲಿ ಬದಲಾವಣೆ ಮಾಡುವುದಿಲ್ಲ, ಅಂತಹ ಬದಲಾವಣೆ ನಮ್ಮ ಕಣ್ಣ ಮುಂದೆ ಇಲ್ಲ ಎಂದರು.
ನಿರಾಣಿ ಮುಂದಿನ ಸಿಎಂ ಎಂಬ ಈಶ್ವರಪ್ಪ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು 2023 ಆದ ಮೇಲೆ ಅಂತಾ ಈಶ್ವರಪ್ಪನವರು ಹೇಳಿದ್ದಾರೆ. ಅವತ್ತಿನ ಸಮಯ, ಸಂದರ್ಭ ಹೇಗಿರುತ್ತೋ ಗೊತ್ತಿಲ್ಲ, ಸಿಎಂ ಬದಲಾವಣೆ ಮಾಡುವ ಪ್ರಕ್ರಿಯೆ ಸದ್ಯಕ್ಕಿಲ್ಲ ಎಂದರು.
ಮತಾಂತರ ತಡೆ ಕಾಯ್ದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಕೆಲ ತೀರ್ಮಾನ ಆಗಿವೆ. ತೀರ್ಮಾನದಂತೆ ಆ ವಿಚಾರಗಳು ಬರಲಿವೆ, ಇದಕ್ಕೆ ವಿರೋಧ ಪಕ್ಷದ ಪ್ರತಿಕ್ರಿಯೆ ನೋಡಬೇಕಿದೆ. ಸಹಕಾರ ಕೊಡುತ್ತಾರೋ ವಿರೋಧ ಮಾಡುತ್ತಾರೋ ಎಂಬುದನ್ನು ನೋಡಬೇಕು. ಎಲ್ಲ ವಿಷಯಕ್ಕೂ ಅವರು ವಿರೋಧ ಮಾಡುತ್ತ ಬಂದಿದ್ದಾರೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
PublicNext
21/12/2021 02:30 pm