ಬೆಳಗಾವಿ: ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು, ತನ್ನ ವೈಫಲ್ಯಗಳನ್ನು ಮರೆಮಾಚಲು ರಾಜ್ಯದ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದೆ. ಸರ್ಕಾರದ ನಡೆ ಸಂವಿಧಾನದ ವಿರುದ್ಧವಾದದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು. ಅನ್ಯ ಧರ್ಮೀಯರು ಬಂದು ಹರೇ ರಾಮ ಹರೇ ಕೃಷ್ಣಾ ಅಂತಾ ಭಜನೆ ಮಾಡ್ತಾರೆ. ನಮ್ಮದು ಸೆಕ್ಯುಲರ್ ರಾಜ್ಯ. ಶಾಂತಿ ಭೂಮಿ, ಶಾಂತಿಯ ತೋಟ. ಶಾಂತಿ ಕೆಡಿಸಲು ಇದೊಂದು ಪ್ರಯತ್ನ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮೊಘಲರು, ಪರ್ಶಿಯನ್ನರು ಬಂದು ಆಳಿದರೂ ಎಲ್ಲಿ ಅವರ ಸಂಖ್ಯೆ ಜಾಸ್ತಿಯಾಯ್ತು?. ಎಲ್ಲರಿಗೂ ಸೆಂಟ್ ಜೋಸೆಪ್, ಸೆಂಟ್ ಮಾರ್ಥಸ್, ಕ್ರೈಸ್ತ್ ಬೇಕು . ಎಲ್ಲರ ಮಕ್ಕಳಿಗೂ ಕಾನ್ವೆಂಟ್ ಬೇಕು..ನಾನು ನಮ್ಮ ಹಳ್ಳಿಯಲ್ಲಿ ಕ್ರೈಸ್ತ್ ಶಾಲೆಯಲ್ಲಿ ಓದಿದೆ. ನನಗೆ ಯಾವತ್ತೂ ಅವರ ಧರ್ಮದ ಬಗ್ಗೆ ಭೋದಿಸಿಲ್ಲ ಎಲ್ಲಾದರೂ ಅವರು ಬಲವಂತ ಮಾಡಿದ್ದಾರಾ? ಅವರು ಸೇವೆ ನೀಡುತ್ತಿದ್ದಾರೆ. ಅಂತವರಿಗೆ ಅನಗತ್ಯವಾಗಿ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಆಗುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.
ಎರಡು ಧರ್ಮದವರು ಪರಸ್ಪರ ಪ್ರೀತಿ ಮಾಡಿ ಮದುವೆ ಆದರೆ ಅದು ಮತಾಂತರ ಹೇಗಾಗುತ್ತೆ? ಎರಡು ಹೃದಯಗಳು ಒಂದಾದರೆ ಅದು ಲವ್ ಜಿಹಾದ್ ಹೇಗಾಗುತ್ತೆ? ಅಕ್ಕಿ ಒಂದು ಕಡೆ ಇರುತ್ತೆ, ಅರಿಶಿನ ಒಂದು ಕಡೆ ಇರುತ್ತೆ. ಅವೆರಡೂ ಸೇರಿ ಮಂತ್ರಾಕ್ಷತೆ ಆಗುತ್ತದೆ. ಹಾಗೆ ಬೇರೆಬೇರೆ ಧರ್ಮದವರ ಪ್ರೀತಿ, ಮದುವೆ ಎಂದು ಡಿಕೆಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
PublicNext
21/12/2021 12:50 pm