ನವದೆಹಲಿ : ದೇಶಕ್ಕಾಗಿ ತ್ಯಾಗ ಮಾಡಿದ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೃತ್ಯವನ್ನು ಯಾರೂ ಸಹಿಸುವುದಿಲ್ಲ, ಇದು ನಿಜಕ್ಕೂ ಖಂಡನಾರ್ಹ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಸ್ಯಾಂಕಿ ಕೆರೆ ಬಳಿಯ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಕೃತ್ಯಕ್ಕೆ ಸಂಬಂಧಿಸಿದಂತೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ ಎಂದಿರುವ ಜೋಶಿ, ಸರ್ಕಾರ ಕಾನೂನು ಭಂಗ ಮಾಡುವವರಿಗೆ ಅವಕಾಶ ನೀಡುವುದಿಲ್ಲ, ದೇಶಭಕ್ತರಿಗೆ ಗೌರವ ಕೊಡಬೇಕು ಎಂದು ನಾನು ಎಲ್ಲರಿಗೂ ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬೆಳಗಾವಿ ಹಾಗೂ ಬೆಂಗಳೂರಿನ ಘಟನೆಗಳ ಬಗ್ಗೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು, ತೆಗೆದುಕೊಳ್ಳಲು ನಿರ್ದೇಶಿಸಿದ್ದೇನೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು, ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಭಗ್ನ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನವದೆಹಲಿಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರುವ ಜೋಶಿ ದೇಶಕ್ಕಾಗಿ ತ್ಯಾಗ ಮಾಡಿದ್ದಕ್ಕೆ ಅವರ ಮೂರ್ತಿ ಸ್ಥಾಪಿಸಲಾಗಿದೆ.
ನಮ್ಮ ಸರ್ಕಾರ ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ಏನೇ ಹೇಳುವುದಿದ್ದರೂ ಶಾಂತವಾಗಿ ಹೇಳಬೇಕು. ಸರ್ಕಾರ ಕಾನೂನು ಭಂಗ ಮಾಡುವವರಿಗೆ ಅವಕಾಶ ನೀಡಲ್ಲ. ದೇಶಭಕ್ತರಿಗೆ ಗೌರವ ಕೊಡಬೇಕು ಎಂದು ನಾನು ಎಲ್ಲರಲೂ ಮನವಿ ಮಾಡುತ್ತೇನೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಇಬ್ಬರೂ ದೇಶಭಕ್ತರು. ಇವರು ಭಾಷೆ, ಸಮುದಾಯ ಎಲ್ಲವನ್ನೂ ಮೀರಿ ಬೆಳೆದವರು. ಇಂತಹವರ ಪ್ರತಿಮೆಗಳಿಗೆ ಮಸಿ ಬಳಿಯುವಂತಹ ಹೀನ ಕೃತ್ಯಕ್ಕೆ ಇಳಿಯಬಾರದು ಎಂದೂ ಜೋಶಿ ಹೇಳಿದ್ದಾರೆ.
ಇಂತಹ ಕೃತ್ಯಗಳು ನಡೆದಾಗ ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೃತ್ಯಕ್ಕೆ ಕೈ ಹಾಕಬಾರದು ಎಂದೂ ಜೋಶಿ ಹೇಳಿದ್ದಾರೆ.
PublicNext
19/12/2021 09:47 pm