ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ
ನಮ್ಮದೆ ಅನ್ನ ತಿಂದು ನಮ್ಮ ನೀರು ಕುಡಿದು ಕಳೆದ 25 ವರ್ಷಗಳಿಂದ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿರುವ ಬೆಳಗಾವಿ " ಝಾಪಾ'' ( ಝಾಲಾಚ ಪಾಯಿಜೆ) ಗಳನ್ನು ಇನ್ನೆಷ್ಟು ಸಹಿಸಿಕೊಳ್ಳುತ್ತೀರಿ ಸಿ.ಎಂ ಬೊಮ್ಮಾಯಿ ಅವರೆ?
ಸಂಪೂರ್ಣ ಸರಕಾರವೇ ಬೆಳಗಾವಿಯಲ್ಲಿ ಝಂಡಾ ಊರಿದೆ. ಪೊಲೀಸ್ ಪಡೆ ಕಾವಲು ಕಾಯುತ್ತಿರುವಾಗ ಮರಾಠಿ ಪುಂಡರು ಸರಕಾರಿ ವಾಹನಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕನ್ನಡಿಗರ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಿದ್ದಾರೆ. ಇವರ ದುರ್ವತನೆಗೆ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗುತ್ತಿರುವುದನ್ನು ನೋಡಿದರೆ ಕರ್ನಾಟಕ ಸರಕಾರ ಕೇವಲ ಬೆದರು ಬೊಂಬೆ ಎಂದು ಮರಾಠಿಗರು ಭಾವಿಸಿದಂತಿದೆ.
ಯಾವುದೆ ಪಕ್ಷದ ಸರಕಾರ ಬಂದರೂ ಬೆಳಗಾವಿ ಮರಾಠಿ ಗೂಂಡಾಗಳ ಮುಂದೆ ಮಂಡಿಯೂರುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಅಡ್ಡಿ ಮಾಡಿದ ಇದೇ ಮರಾಠಿ ನಾಯಕರು ಈಗ ಅಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸರಕಾರಿ ವಾಹನಗಳನ್ನು ಧ್ವಂಸಗೊಳಿಸಿದ್ದು ನೋಡಿದರೆ ನಾವು ತಲೆ ತಗ್ಗಿಸಬೇಕು.
ಬೊಮ್ಮಾಯಿ ಅವರೆ ಕೇವಲ ಮಾಧ್ಯಮಗಳ ಮುಂದೆ, ಪುಂಡಾಟಿಕೆ ಖಂಡಿಸುತ್ತೇವೆ ಮಟ್ಟ ಹಾಕುತ್ತೇವೆ ಎಂದು ಹೇಳಿಕೆಗಳ ಪೌರಷ ತೋರಿಸಿದರೆ ಸಾಲದು, ಈಗ ಪುಂಡಾಟಿಕೆ ನಡೆಸಿ ಬಂಧಿತರಾಗಿರುವ ಮರಾಠಿಗರಿಗೆ ಜಾಮೀನು ಸಿಗದಂತೆ ಹಾಗೂ ಅವರಿಗೆ ಉಗ್ರ ಶಿಕ್ಷಯಾಗುವಂತೆ ನೋಡಿಕೊಂಡರೆ ಅದು ಇತರರಿಗೆ ಪಾಠವಾದೀತು. ಇದರಲ್ಲಿ ಬಿಜೆಪಿ. ಕಾಂಗ್ರೆಸ್ ಎಂಬ ಪಕ್ಷ ರಾಜಕಾರಣ ನುಸುಳದೇ ಪಕ್ಕಾ ಕನ್ನಡಿಗರಾಗಬೇಕು ಹಾಗೂ ಕನ್ನಡಾಂಬೆಯ ಆರಾಧಕರಾಗಬೇಕು.
ಅಲ್ಲಿ ಮರಾಠಿಗರು ಪುಂಡಾಟಿಕೆ ನಡಿಸಿದರೆ ನಮ್ಮವರು ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಇದೂ ಸಹ ತಪ್ಪು. ಕನ್ನಡ ಮರಾಠಿಗರ ಕಿತ್ತಾಟದಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಹಾಗೂ ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಅವರಂತ ಇತಿಹಾಸ ಪುರುಷರು ಅಗೌರವಕ್ಕೊಳಗಾಗಿರುವುದು ವಿಷಾದನೀಯ.
80 ರ ದಶಕದಿಂದ ಈ ಮರಾಠಿ ಗೂಂಡಾಗಳ ಪುಂಡಾಟಿಕೆ ನಿರಂತರವಾಗಿ ನಡೆದಿದೆ. ನವೆಂಬರ್ ೧ ರ ನಮ್ಮ ಕನ್ನಡ ರಾಜ್ಯೋತ್ಸವ ದಿನದಂದೆ ಕಪ್ಪುದಿನ ಆಚರಣೆಗೆ ಹಾಗೂ ಬಂದ್ ಕರೆ ನೀಡುವುದು ಅವ್ಯಾಹತವಾಗಿ ನಡೆದಿದೆ.
ಈ ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ದಿ. ಪಾಟೀಲ ಪುಟ್ಟಪ್ಪನವರನ್ನು ಇದೇ ಮರಾಠಿ ಪುಂಡರು ಬೆಳಗಾವಿ ನಗರಸಭೆಯಲ್ಲಿ ಎಳೆದಾಡಿ ಹಲ್ಲೆ ಮಾಡಿದ್ದನ್ನು ನಮ್ಮ ಸರಕಾರ ಮೂಕ ಪ್ರೇಕ್ಷಕನಾಗಿ ನೋಡುತ್ತ ಕುಳಿತಿತು. ನಂತರ ಬಂದ ಚಂದ್ರಶೇಖರ ಪಾಟೀಲರ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿತ್ತು.
1986 ರಲ್ಲಿ ಕೆಲವು ಕಿಡಿಗೇಡಿಗಳು ಸಂಕೇಶ್ವರಲ್ಲಿ ಶಿವಾಜಿ ಪುತ್ಥಳಿಗೆ ಅವಮಾನ ಮಾಡಿದ್ದನ್ನೆ ನೆಪವಾಗಿಟ್ಟುಕೊಂಡು ಮರಾಠಿ ಗೂಂಡಾಗಳು ಎರಡು ತಿಂಗಳು ಕಾಲ ಬೆಳಗಾವಿಯನ್ನು ಅಕ್ಷಶಃ ಹಾಳುಗೆಡವಿದ್ದವು.
ರಕ್ಕಸಕೊಪ್ಪ ಜಲಾಶಯದಿಂದ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಪೈಪುಗಳನ್ನು ಒಡೆದು ಹಾಕಿ ನಗರದ ಜನತೆ ಜೀವ ಹಿಂಡಿದ ಮರಾಠಿಗರು ಬೆಳಗಾವಿ ಕನ್ನಡಿಗರ ಅಂಗಡಿ ಮುಂಗಟ್ಟುಗಳನ್ನು ಸುಟ್ಟು ಹಾಕಿದ್ದರು. ಅಂದಿನ ಘಟನಾವಳಿಗಳ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರಲ್ಲಿ ನಾನೂ ಒಬ್ಬನಾಗಿ ಪೊಲೀಸರ ಏಟು ತಿಂದಿದ್ದುಂಟು.
ಅಂದು ಎಸ್ಪಿ ಆಗಿದ್ದ ಕೆ. ನಾರಾಯಣ ಎಂಬ ಧಾಡಸಿ ಪೊಲೀಸ್ ಅಧಿಕಾರಿ ಕ್ರಮ ಮೆಚ್ಚಲೇ ಬೇಕಾಗಿತ್ತು. ಬೆಳಗಾವಿಯನ್ನು ರಣರಂಗ ಮಾಡಿದ್ದ ಮರಾಠಿ ಗೂಂಡಾಗಳನ್ನು ಹೆಡಮುರಿ ಕಟ್ಟಿ ಕಂಬಿ ಹಿಂದೆ ಹಾಕಿದ್ದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಹಾರಿಸಿ ಗುಂಡಿಗೆ 17 ಬಲಿಯಾಗಿದ್ದರು. ಇದನ್ನೆ ನೆಪವಾಗಿಟ್ಟುಕೊಂಡು ಇಂದಿಗೂ ಈ ಝಾಪಾಗಳು ಕರಾಳ ದಿನ ಆಚರಿಸುತ್ತಿರುವುದು ಇತಿಹಾಸ.
ಅಂದಿನಿಂದ ಬೆಳಗಾವಿಯಲ್ಲಿ ಎಂಇಎಸ್ ನಿಧಾನವಾಗಿ ಕ್ಷೀಣಿಸುತ್ತಲೇ ಬಂದಿದೆ. ಆದರೆ ಈಗ ಮಹಾರಾಷ್ಟ್ರದಲ್ಲಿ ಎಂಇಎಸ್ ಕಾಂಗ್ರಸ್ ಜೊತೆ ಸರಕಾರ ರಚಿಸಿದಾಗಿನಿಂದ ಮತ್ತೆ ಬಾಲ ಬಿಚ್ಚ ತೊಡಗಿದೆ. ಕೆಲವು ತಿಂಗಳ ಹಿಂದ ಕ್ಷುಲ್ಲಕ ಕಾರಣಕ್ಕೆ ಕೊಲ್ಲಾಪುರದಲ್ಲಿ ಕರ್ನಾಟಕದ ಬಸ್ಸುಗಳನ್ನು ಧ್ವಂಸಗೊಳಿಸಿದ್ದರು. ಈಗ ಮುಂಬೈಯಲ್ಲಿ ಕನ್ನಡಿಗರ ವಾಹನಗಳು ಹಾಗೂ ಹೊಟೆಲುಗಳ ಮೇಲೆ ದಾಳಿ ಮಾಡಲಾಗಿದೆ.
ಇನ್ನಾದರೂ ಕರ್ನಾಟಕ ಸರಕಾರ ಎಚ್ಚೆತ್ತುಕೊಳ್ಳಲೇ ಬೇಕು. ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಅಥವಾ ಕನ್ನಡ ಕಾರ್ಯಕ್ರಮಗಳಿಗೆ ಉದ್ದೇಶ ಪೂರ್ವಕವಾಗಿ ಅಡ್ಡಿಯುಂಟು ಮಾಡುವ ಹುನ್ನಾರ ನಡಯುತ್ತದೆ. ಇದಕ್ಕೆ ಪೂರ್ಣವಿರಾಮ ಹಾಡಲೇಬೇಕು.
PublicNext
19/12/2021 12:04 pm