"ಮಾತು ಆಡಿದರಾಯ್ತು ಮುತ್ತು ಒಡೆದರೆ ಹೋಯ್ತು'' ಎಂಬ ಗಾದೆ ಮಾತಿನ ಅರಿವು ಬಹುತೇಕ ರಾಜಕೀಯ ನಾಯಕರಿಗೆ ಇದ್ದಂತಿಲ್ಲ. ಕೆಲವರು ತಿಳಿದೋ ತಿಳಿಯದೆಯೋ ಅಸಂವಿಧಾನಿಕ ಅಥವಾ ಅಪಶಬ್ದಗಳನ್ನು ಬಳಸಿದರೆ, ಇನ್ನು ಕೆಲವರು ಅತಿ ಬುದ್ಧಿವಂತರು ಎಂದು ಬಿಂಬಿಸಲು ಬಾಯಿ ಚಪಲಕ್ಕೆ ತಾವು ನಿಂತ ಸ್ಥಳದ ಪಾವಿತ್ರ್ಯಕ್ಕೂ ಬೆಲೆ ಕೊಡದೆ ಕೆಟ್ಟ ಪದಗಳನ್ನು ಬಳಸಿ ಮಾತನಾಡುತ್ತಾರೆ.
ಗುರುವಾರ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಮುಖಂಡ ಕೆ. ಆರ್ ರಮೇಶಕುಮಾರ್ ಅವರು ಮಹಿಳೆಯರ ಕುರಿತು ಆಡಿದ ಮಾತುಗಳು ರಾಜ್ಯ ವಿಧಾನಸಭೆ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಅದರಲ್ಲಿ ಈಗಿನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಭಾಗಿಯಾಗುತ್ತಾರೆ.
" ರಮೇಶಕುಮಾರ್ ಅವರೆ ವಿಧಾನಸಭೆಯಂತಹ ಪವಿತ್ರ ಸ್ಥಾನದಲ್ಲಿ ಹಿರಿಯರಾದ ನಿಮ್ಮಂಥವರಿಂದ ಇಂತ ಕೆಟ್ಟ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಕೂಡಲೇ ಕ್ಷಮೆ ಕೇಳಬೇಕು'' ಎಂದು ಆದೇಶಿಸುವ ಬದಲು ಕಿಸಿ ಕಿಸಿ ನಗುತ್ತ ಕುಳಿತಿದ್ದು ಸರ್ವಥಾ ತಪ್ಪು ಎಂದು ಸಭಾಧ್ಯಕ್ಷ ಕಾಗೇರಿ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.
" ರೇಪ್ ತಡೆಯಲು ಆಗದಿದ್ದರೆ ಮಲಗಿ ಎಂಜಾಯ್ ಮಾಡಿ '' ಎಂದು ಮಹಿಳೆಯರ ಬಗ್ಗೆ ಅತ್ಯಂತ ಹಗುರವಾಗಿ ಕೆ.ಆರ್ ರಮೇಶಕುಮಾರ್ ಆಡಿರುವ ಮಾತುಗಳು ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅನೇಕ ಬಾರಿ ಶಾಸಕರಾಗಿ, ಸಚಿವರಾಗಿ, ವಿಧಾನಸಭಾಧ್ಯಕ್ಷರಾಗಿ ಸಚಿವರು ಸೇರಿದಂತೆ 224 ಶಾಸಕರಿಗೆ ಬುದ್ಧಿ ಮಾತು ಹೇಳಿದ ಇದೇ ರಮೇಶಕುಮಾರ್ ಬುದ್ಧಿಗೇಡಿತನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಡ್ರಾ ಸಹ ಛೀಮಾರಿ ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ " ರಮೇಶಕುಮಾರ್ ಹೇಳಿಕೆಯನ್ನು ನಾನು ಹೃದಯಪೂರ್ವಕವಾಗಿ ಖಂಡಿಸುತ್ತೇನೆ. ಯಾರಾದರೂ ಇಂತಹ ಪದಗಳನ್ನು ಹೇಗೆ ಬಳಸಲು ಸಾಧ್ಯ? ಇದು ಅಸಮರ್ಥನೀಯವಾಗಿದೆ. ಅತ್ಯಾಚಾರ ಒಂದು ಘೋರ ಅಪರಾಧ '' ನೊಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಹ ಮಹಿಳೆಯರ ಕುರಿತು ತಮ್ಮ ಪಕ್ಷದ ರಮೇಶಕುಮಾರ್ ಮಾತುಗಳನ್ನು ಖಂಡಿಸಿದ್ದಾರಲ್ಲದೆ ಕಾಂಗ್ರೆಸ್ ಪಕ್ಷ ಲಿಂಗ ಸಮಾನತೆಯ ಚಾಂಪಿಯನ್ ಎಂದು ಬಣ್ಣಿಸಿದ್ದಾರೆ.
ಆದರೆ ತಮ್ಮದೇ ಪಕ್ಷವನ್ನು ಪ್ರತಿನಿಧಿಸುವ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹುಡುಗಾಟಿಕೆ ವರ್ತನೆ ವಿರುದ್ಧ ಬಿಜೆಪಿ ನಾಯಕರು ಮೌನವಾಗಿರುವುದು ಸಹ ಖಂಡನೀಯ.
ಕಾಂಗ್ರೆಸ್ಸಿನ ರಮೇಶಕುಮಾರ ಮಾತುಗಳು ರಾಷ್ಟ್ರಮಟ್ಟದಲ್ಲಿ ಪ್ರತಿ ಪಕ್ಷಗಳ ಟೀಕೆಗೆ ಅಹಾರವಾಗಿದೆ. ಮುಂಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಡ್ರಾ, ಆ ರಾಜ್ಯಗಳಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಬಿಂಬಿಸ ತೊಡಗಿರುವಾಗ ರಮೇಶಕುಮಾರ್ ಹೇಳಿಕೆಯನ್ನೇ ಬಳಸಿಕೊಂಡು ಪ್ರತಿ ಪಕ್ಷಗಳ ನಾಯಕರು ಹರಿಹಾಯ ತೊಡಗಿದ್ದಾರೆ.
PublicNext
17/12/2021 08:27 pm