ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ
ನೋಡಿ ನಮ್ಮನ್ನಾಳುವ ನಾಯಕರ ಬೇಜವಾಬ್ದಾರಿ. ವಿಧಾನ ಸಭೆ, ವಿಧಾನ ಪರಿಷತ್ ಖಾಲಿ ಖಾಲಿ. ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿವೇಶನಕ್ಕೆ ಹಾಜರಾಗದೆ ಅದೆಲ್ಲಿ ತಿರುಗಾಡಲು ಹೋಗಿದ್ದಾರೋ ಗೊತ್ತಿಲ್ಲ. 20 ಕೋಟಿ ನುಂಗಿದ ಬೆಳಗಾವಿ ಅಧಿವೇಶನಕ್ಕೆ 20 ಶಾಸಕರೂ ಸರಿಯಾಗಿ ಹಾಜರಾಗಿಲ್ಲ, ಸುಗಮ ಕಲಾಪ ನಡೆದಿಲ್ಲ.
ಹಾಗಾದರೆ ನೀವೇನು ಪಿಕ್ನಿಕ್ ಮಾಡಲು ಬಂದಿದ್ದೀರಾ? ಉತ್ತರ ಕರ್ನಾಟಕವೆಂದರೆ ಏಕಿಷ್ಟು ನಿಮಗೆ ತಾತ್ಸಾರ? ಸರಕಾರಿ ಕಚೇರಿಗಳಿಗೆ ಸುತ್ತಿ ನೌಕರರ ಹಾಜರಾತಿ ಕೇಳುವ, ಆಸ್ಪತ್ರೆಗಳಿಗೆ ನುಗ್ಗಿ ವೈದ್ಯರ ಉಪಸ್ಥಿತಿ ಪ್ರಶ್ನಿಸುವ ನೀವು ಈ ರೀತಿ ಅಧಿವೇಶನಕ್ಕೆ ಚಕ್ಕರ್ ಹೊಡೆದು ಗೋವಾಕ್ಕೆ ಮಜಾ ಮಾಡಲು ಹೋಗಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೆ? ಎಂದು ಮತದಾರರು ಕೇಳಿದರೆ ಏನು ಉತ್ತರಿಸುವಿರಿ.
ನೂರಾರು ಕೋಟಿ ವೆಚ್ಚದಲ್ಲಿ ಕಟ್ಟಿರುವ ವಿಧಾನ ಸೌಧದ ಪ್ರತಿ ವರ್ಷದ ನಿರ್ವಹಣೆಗೆ ಹತ್ತಾರು ಕೋಟಿ. ಬಿಳಿ ಅನೆಯಾಗಿರುವ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಮೂರು ವರ್ಷಗಳ ನಂತರ ಅಧಿವೇಶನ ನಡೆಯುತ್ತಿದೆ. ಮಳೆಯಿಂದ ಹಾನಿಗೊಳಗಾದ ರೈತರಿಗೆ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ದೊರೆತಿಲ್ಲ.
ರಸ್ತೆಗಳು ಕೆಟ್ಟು ಕೆರಹಿಡಿದಿವೆ. ನಿತ್ಯ ಅಪಘಾತಗಳು ಸಂಭವಿಸಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅಧಿವೇಶನಕ್ಕೆ ವೆಚ್ಚ ಮಾಡುವ 20 ಕೋಟಿಗಳನ್ನು ರಸ್ತೆ ದುರಸ್ತಿಗಾದರೂ ಕೊಟ್ಟಿದ್ದರೆ ಅನೇಕರ ಜೀವ ಉಳಿಯುತ್ತಿತ್ತು. ಮಳೆಯಿಂದ ಮನೆ ಕಳೆದುಕೊಂಡವರಿಗೆ ನೆಮ್ಮದಿಯ ಸೂರು ಸಿಗುತ್ತಿತ್ತು. ಸಮಸ್ಯೆಗಳ ಪಟ್ಟಿ ಮಾಡಿದರೆ ಅದಕ್ಕೆ ಕೊನೆಯೇ ಇಲ್ಲ.
ಅಧಿವೇಶನದಿಂದ ಜನಸಾಮಾನ್ಯರಿಗೆ ಏನು ಉಪಯೋಗವಾಗುತ್ತೋ ಗೊತ್ತಿಲ್ಲ ಆದರೆ ಬೆಳಗಾವಿ ಹಾಗೂ ಹುಬ್ಬಳ್ಳಿಯ ಹೊಟೆಲ್ ಲಾಜಿಂಗ್ ಮಾಲಿಕರಂತೂ ಧನ್ಯ. 224 ಎಂಎಲ್ಎಗಳು 75 ಎಂಎಲ್ಸಿಗಳು ಅವರ ವಾಹನ ಚಾಲಕರು, ಗನ್ ಮ್ಯಾನ್ ಗಳು. ಇದಲ್ಲದೆ ಸುಮಾರು 1500 ಅಧಿಕಾರಿಗಳು, ಇತರೆ ಸಿಬ್ಬಂದಿ ಹಾಗೂ ಮಾಧ್ಯಮಗಳ ಪ್ರತಿನಿಧಿಗಳು ಬೆಳಗಾವಿಯಲ್ಲಿ ಉಳಿದುಕೊಳ್ಳುತ್ತಾರಂತೆ.
ಇವರೆಲ್ಲರ ಊಟ ವಸತಿ, ಓಡಾಟಕ್ಕಾಗಿ ಅಂದಾಜು ನಿತ್ಯ 2 ಕೋಟಿ ರೂ ಖರ್ಚು. ಈ ಎಲ್ಲ ಶಾಸಕರು ಬೆಳಗಾವಿ ಹಾಗೂ ಸುತ್ತಲಿನ ನಗರಗಳಲ್ಲಿಯ 60 ಹೊಟೆಲುಗಳಲ್ಲಿ ಉಳಿದುಕೊಳ್ಳುತ್ತಾರೆ. ಶಾಸಕರ ಹೊಟೆಲ್ ವಾಸ್ತವ್ಯಕ್ಕೆ ದಿನಕ್ಕೆ ಸುಮಾರು 2500 ರೂ ಪ್ಲಸ್ ಇತರೆ ಭತ್ತೆಗಳು.
ಇದೆಲ್ಲ ದುಂದುವೆಚ್ಚವಲ್ಲವೆ? ಸ್ವಾಮಿ ಇದು ನಮ್ಮ ನಿಮ್ಮೆಲ್ಲರ ಬೆವರಿನ ಹಣ. ಟ್ಯಾಕ್ಸ್ ರೂಪದಲ್ಲಿ ಸರಕಾರಕ್ಕೆ ಕೊಡುತ್ತೇವೆ. ಆದರೆ ಇದನ್ನು ಪ್ರಶ್ನಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಯಾರು ಅಧಿವೇಶನ್ನೆ ಹಾಜರಾಗಿಲ್ಲ, ಹಾಜರಾದರೂ ಕಲಾಪಗಳಲ್ಲಿ ಭಾಗವಹಿಸಿಲ್ಲ ಆ ಶಾಸಕರ ಹೆಸರು ಬಹಿರಂಗಪಡಿಸಬೇಕು. ಮುಂದಿನ ಚುನಾವಣೆಯಲ್ಲಾದರೂ ಇವರಿಗೆ ತಕ್ಕ ಪಾಠ ಕಲಿಸಬೇಕು.
PublicNext
17/12/2021 10:08 am