ವಾರಾಣಸಿ (ಉತ್ತರ ಪ್ರದೇಶ): ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 13ರಂದು ವಾರಾಣಸಿಗೆ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿನ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಇರುವ ಮಸೀದಿಯೊಂದಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು ಸ್ಥಳೀಯ ಮುಸ್ಲಿಂ ಮುಖಂಡರು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶಿತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಸೀದಿ ಕಮಿಟಿಯ ಮುಖಂಡ ಮಹಮ್ಮದ್ ಇಜಾಜ್ ಇಲಾಹಿ ಅವರು, ಮಸೀದಿಗೆ ಕೇಸರಿ ಬಣ್ಣ ಬಳಿಯುವ ಮುನ್ನ ಈ ವಿಷಯವನ್ನು ಯಾರೂ ಕೂಡ ನಮ್ಮ ಗಮನಕ್ಕೆ ತಂದಿರಲಿಲ್ಲ. ಏಕಾಏಕಿ ಬಂದು ಬಣ್ಣ ಬಳಿಯಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘಟಕರು ಮಸೀದಿಗೆ ಪುನಃ ಬಿಳಿ ಬಣ್ಣ ಬಳಿಸಿದ್ದಾರೆ ಎಂದು ಹೇಳಿದ್ದಾರೆ.
ಡಿಸೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಗವಾಗಿ ವಿಶ್ವನಾಥ ದೇವಾಲಯಕ್ಕೆ ತೆರಳಲಿದ್ದಾರೆ. ಅವರ ಭವ್ಯ ಸ್ವಾಗತಕ್ಕಾಗಿ ರಸ್ತೆಯ ಅಕ್ಕಪಕ್ಕ ಒಂದೇ ಬಣ್ಣ ಕಾಣುವಂತೆ ಕಾರ್ಯಕ್ರಮ ಆಯೋಜಕರು ಈ ರೀತಿ ಎಲ್ಲ ಕಟ್ಟಡಗಳಿಗೂ ಒಂದೇ ಬಣ್ಣ ಬಳಿದಿದ್ದಾರೆ.
PublicNext
08/12/2021 04:15 pm