ಶಿವಮೊಗ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪುಟಾಣಿ ಬಾಲಕಿ ಜೊತೆಗೆ ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದರ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಚುನಾವಣೆ ಪ್ರಚಾರ, ಮುಖಂಡರು, ಕಾರ್ಯಕರ್ತರ ಭೇಟಿ, ರಾಜಕೀಯ ಜಂಜಾಟದ ನಡುವೆ ಫುಲ್ ಬ್ಯೂಸಿ ಆಗಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಗರ ರಸ್ತೆಯ ಹರ್ಷಾ ಫರ್ನ್ ಹೋಟೆಲ್‌ನಲ್ಲಿ ಉಳಿದಿದ್ದರು.
ಸಿದ್ದರಾಮಯ್ಯ ಅವರನ್ನು ತೋರಿಸಲು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಕ್ ಕುಮಾರ್ ಅವರು ತಮ್ಮ ಮಗಳು ಸಾನ್ವಿಯನ್ನು ಹೋಟೆಲ್‌ಗೆ ಕರೆದೊಯ್ದಿದ್ದರು. ತಮ್ಮ ಸುತ್ತಲೂ ಮುಖಂಡರು, ಕಾರ್ಯಕರ್ತರಿದ್ದರೂ ಪುಟಾಣಿ ಸಾನ್ವಿಯನ್ನು ನೋಡುತ್ತಿದ್ದಂತೆ ಸಿದ್ದರಾಮಯ್ಯ ಖುಷಿ ಪಟ್ಟರು. ಹತ್ತಿರಕ್ಕೆ ಕರೆದು ಮಾತು ಆರಂಭಿಸಿದರು. ‘ಇಲ್ಲಿಗೇಕೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದು ಬಾಲಕಿ ಹೇಳಿದಾಗ ಸಿದ್ದರಾಮಯ್ಯ ಸೇರಿದಂತೆ ಸುತ್ತಲೂ ಇದ್ದವರು ಜೋರಾಗಿ ನಗಾಡಿದರು.
ಆಗಾಗ ಬರುತ್ತಿದ್ದ ಫೋನ್ ಕರೆಗಳನ್ನು ಸ್ವೀಕರಿಸಿ ಮಾತು ಮುಗಿಸಿ, ಸಾನ್ವಿ ಜೊತೆಗೆ ಸಿದ್ದರಾಮಯ್ಯ ಅವರು ಕೆಲವು ನಿಮಿಷ ಕಳೆದರು. ಆಕೆಯನ್ನು ಮಾತನಾಡಿಸಿ, ಚನ್ನಾಗಿ ಓದಬೇಕು ಎಂದು ತಿಳಿಸಿದರು. ಕೆನ್ನೆಗೊಂದು ಮುತ್ತು ಕೊಡಿಸಿಕೊಂಡು ಖುಷಿ ಪಟ್ಟರು.
PublicNext
05/12/2021 03:04 pm