ಪಬ್ಲಿಕ್ ನೆಕ್ಸ್ಟ್ ವಿಶೇಷ : ಮಲೇಶ ಸೂರಣಗಿ
ಹುಬ್ಬಳ್ಳಿ : ಹಾನಗಲ್ ಉಪಚುನಾವಣೆ ಸೋಲಿನ ಆಘಾತದಿಂದ ಸುಧಾರಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿರುವಾಗಲೇ ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಬಿಜೆಪಿ ನಾಯಕರ ನಿದ್ದೆಗಡಿಸಿದ್ದಾರೆ. ಒಂದು ವೇಳೆ ಫಲಿತಾಂಶ ಏರುಪೇರಾದರೆ ಹಾನಗಲ್ ಸೋಲಿನ ಗಾಯಕ್ಕೆ ಬಂಡಾಯದ ಬರೆ ಎಳೆದಂತಾಗುತ್ತದೆ.
ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ- ಕಾಂಗ್ರೆಸ್ ತಲಾ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದವು.
ಆದರೆ ಸಿಎಂ ತವರು ಕ್ಷೇತ್ರದಲ್ಲಿಯೇ ಬಿಜೆಪಿಗೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿರುವುದು ಪ್ರದೀಪ ಶೆಟ್ಟರ್ ಗೆಲುವಿಗೆ ತಡೆಯೊಡ್ಡುವ ಆತಂಕ ಶುರುವಾಗಿದೆ.
ಬಿಜೆಪಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ಹಾಲಿ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ್ ಅವರನ್ನು ಮಾತ್ರ ಕಣಕ್ಕಿಳಿಸಿದೆ. ಆರಂಭದಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗಿತ್ತಾದರೂ ಕಳೆದ ಬಾರಿಯ ಚುನಾವಣೆಯಲ್ಲಿ ಪ್ರದೀಪ ಶೆಟ್ಟರ್ ಗೆದ್ದರೂ ಎರಡನೇ ಸ್ಥಾನದಲ್ಲಿದ್ದರು ಎನ್ನುವ ಕಾರಣಕ್ಕೆ ಇನ್ನೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಪ್ರದೀಪ ಶೆಟ್ಟರ್ ಕಳೆದ ಬಾರಿ 3400 ರಷ್ಟು ಮತ ಪಡೆದಿದ್ದರು.
ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 3369 ಮತಗಳಿರುವ ಹಾವೇರಿ ಜಿಲ್ಲೆಯಲ್ಲಿ ಹಾವೇರಿ ಎಪಿಎಂಸಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಾವೇರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಂಡಾಯದ ಬಿಸಿ ತಾಗಿಸಿದ್ದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ.
ಆದರೆ, ಗೆಲುವಿನ ಹಾದಿ ಸುಗಮವಾಗಬೇಕಾದರೆ ಶೇಕಡಾ 50ಕ್ಕಿಂತ ಹೆಚ್ಚು ಮೊದಲು ಪ್ರಾಶಸ್ತ್ಯದ ಮತಗಳನ್ನು ಬೇಕು. ಇಲ್ಲದೇ ಹೋದಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಕ್ಕಕ್ಕೆ ಹಾಕಬೇಕಾಗುತ್ತದೆ. ಮೇಲ್ನೋಟಕ್ಕೆ ಮೊದಲ ಪ್ರಾಶಸ್ತ್ಯದ ಮತಗಳ ಮೇಲೆಯೇ ಇಬ್ಬರೂ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ.
ಮೂರು ಜಿಲ್ಲೆಗಳನ್ನು ಹೋಲಿಸಿದಾಗ ಹಾವೇರಿ ಜಿಲ್ಲೆಯಲ್ಲಿ 3369, ಧಾರವಾಡದಲ್ಲಿ 2298, ಗದಗ ಜಿಲ್ಲೆಯಲ್ಲಿ 1981 ಮತದಾರರಿದ್ದು. ಒಟ್ಟು 7663 ಮತದಾರರು ಇಬ್ಬರು ಅಭ್ಯರ್ಥಿಗಳಿಗೆ ತಮ್ಮಹಕ್ಕು ಚಲಾಯಿಸಬಹುದು. ಹಾವೇರಿ ಜಿಲ್ಲೆಯಲ್ಲಿ ಯಾವ ಅಭ್ಯರ್ಥಿ ಹೆಚ್ಚಿನ ಮತ ಪಡೆಯುತ್ತಾರೋ ಅವರು ಸಲೀಸಾಗಿ ಗೆಲ್ಲೋದು. ಆದ್ರೇ ಈ ಬಾರೀ ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿದೆ.
PublicNext
04/12/2021 06:31 pm