ಚಂಡೀಗಢ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ತಂದಿದೆ. ಸಿಧು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ ಎಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಸಿಧು ಪಾಕಿಸ್ತಾನ ಪ್ರೀತಿಯನ್ನು ಬಿಜೆಪಿ ಟೀಕಿಸಿದೆ.
ಪಾಕಿಸ್ತಾನದ ಕರ್ತಾರ್ ಪುರ ಯೋಜನೆಯ ಸಿಇಒ ಜತೆಗೆ ಶನಿವಾರ ಸಂವಾದ ನಡೆಸಿದ ಅವರು ಈ ಹೇಳಿಕೆ ನೀಡಿದ್ದಾರೆ. ಪಂಜಾಬ್ ನ ಹಲವು ಮಂತ್ರಿಗಳ ಜತೆಗೂಡಿ ಸಿಧು ಅವರು ಪಾಕಿಸ್ತಾನದ ಕರ್ತಾರ್ ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ‘ಪಾಕಿಸ್ತಾನದ ಪ್ರಧಾನಿಯ ಮೇಲೆ ನನಗೆ ಅಪಾರ ಪ್ರೀತಿ ಇದೆ,’ ಇಮ್ರಾನ್ ಖಾನ್ ನನ್ನ ಅಣ್ಣನಿದಂತೆ ಎಂದು ಹೇಳಿದ್ದಾರೆ.
ಸದ್ಯ ಸಿಧು ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಕಾಂಗ್ರೆಸ್ ಹೈಕಮಾಂಡ್ 'ಅನುಭವಿ ಅಮರಿಂದರ್ ಸಿಂಗ್ ಗಿಂತ ಪಾಕಿಸ್ತಾನವನ್ನು ಪ್ರೀತಿಸುವ ಸಿಧು ಅವರನ್ನು ಪ್ರೀತಿಸುತ್ತಿದೆ' ಎಂದು ಟೀಕಿಸಿದ್ದಾರೆ.
‘ರಾಹುಲ್ ಗಾಂಧಿಯವರ ನೆಚ್ಚಿನ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ದೊಡ್ಡಣ್ಣ (ಬಡಾ ಬಾಯ್)‘ ಎಂದು ಕರೆದಿದ್ದಾರೆ. ಕಳೆದ ಬಾರಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಅಪ್ಪಿಕೊಂಡಿದ್ದರು, ಪ್ರಶಂಸಿಸಿದ್ದರು,’ ಎಂದು ಮಾಳವಿಯ ಹೇಳಿದರು.
‘ರಾಹುಲ್ ಮತ್ತು ಪ್ರಿಯಾಂಕಾ ಅವರು ಅನುಭವಿ ಅಮರಿಂದರ್ ಸಿಂಗ್ಗಿಂತ ಪಾಕಿಸ್ತಾನವನ್ನು ಪ್ರೀತಿಸುವ ಸಿಧು ಅವರನ್ನು ಆಯ್ಕೆ ಮಾಡಿರುವುದರಲ್ಲಿ ಆಶ್ಚರ್ಯವೇನಾದರೂ ಇದೆಯೇ?‘ ಎಂದು ಪ್ರಶ್ನೆ ಮಾಡಿದ್ದಾರೆ.
PublicNext
20/11/2021 09:50 pm