ಬೆಂಗಳೂರು: ಕಳೆದ ಒಂದು ವರ್ಷದಿಂದ ವ್ಯಾಪಕ ವಿರೋಧ, ಪ್ರತಿಭಟನೆಗೆ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ಕಾರಣವಾಗಿದ್ದವು. ಸದ್ಯ ಈ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಮಾಜಿ ಪ್ರಧಾನಿ, ಜಿಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ಕಾಯ್ದೆಗಳ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ರೂಪಿಸಿದ ರೈತ ಸಮೂಹಕ್ಕೆ ನನ್ನ ಸಲ್ಯೂಟ್" ಎಂದು ಹೇಳಿದ್ದಾರೆ.
ಸಂಸದೀಯ ವ್ಯವಸ್ಥೆಯಲ್ಲಿ ವಾದ ಮಂಡನೆ ಮತ್ತು ಚರ್ಚೆಗಳು ಅತ್ಯಂತ ಪ್ರಮುಖ. ಸೆಪ್ಟೆಂಬರ್ 2020ರಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರಾಜ್ಯಸಭೆಯಲ್ಲಿ ನಾನು ಮಾಡಿದ ಭಾಷಣದ ವಿವರ ಇಲ್ಲಿದೆ ಎಂದು ಹೇಳಿಕೆಯ ಪತ್ರವನ್ನು ದೇವೇಗೌಡರು ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, "ಯಾವುದೇ ಒತ್ತಡಕ್ಕೂ ಮಣಿಯದೇ ಹೋರಾಟ ನಡೆಸಿದ ಪ್ರತಿಯೊಬ್ಬ ರೈತರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಬಿಜೆಪಿಯ ಕ್ರೂರತ್ವವನ್ನು ಮೆಟ್ಟಿನಿಂತು ಹೋರಾಟ ನಡೆಸಿದ್ದೀರಿ. ಇದು ನಿಮ್ಮ ವಿಜಯವಾಗಿದೆ" ಎಂದು ಹೇಳಿದ್ದಾರೆ.
PublicNext
19/11/2021 03:17 pm