ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಜತೆ ಬ್ಯಾಂಕ್ ಲೂಟಿಕೋರ ಫೋಟೋ ಹೇಗೆ ವ್ಯಾಖ್ಯಾನಿಸುವುದು?: ರಾಕೇಶ್ ಫೋಟೋ ಬಿಟ್ಟ ಬಿಜೆಪಿಗೆ ಸಿದ್ದು ಗುದ್ದು

ಬೆಂಗಳೂರು: ಬಿಟ್ ಕಾಯಿನ್ ಹಗರಣದ ವಿಚಾರವಾಗಿ ನಡೆಯುತ್ತಿರುವ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ವಾಕ್ಸಮರ ವೈಯಕ್ತಿಕ ಮಟ್ಟ ಆರೋಪ ಪ್ರತ್ಯಾರೋಪಕ್ಕೆ ತಲುಪಿದೆ. ಜೊತೆಗೆ ಅನೇಕ ಗೊಂದಲ, ತಿರುವುಗಳನ್ನು ನೀಡುತ್ತಿದೆ.

ಬಿಟ್ ಕಾಯಿನ್ ವಿಷಯದಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದ್ದು, ಅವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರು ಕೆಲವರ ಜೊತೆಗೆ ಇದ್ದ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಇದೀಗ ಸಿದ್ದರಾಮಯ್ಯ ಸಹ ಪ್ರತಿಕ್ರಿಯಿಸಿದ್ದು, ಅವರು ಸಹ ಒಂದು ಫೋಟೋ ಬಿಟ್ಟು ರಾಜ್ಯ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನೀರವ್ ಮೋದಿ ಅವರನ್ನು ಮಾರ್ಕ್‌ ಮಾಡಿ ಕೆಲ ಅಂಶಗಳನ್ನ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?:

ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಪಕ್ಷ ಅಗಲಿ ಹೋಗಿರುವ ನನ್ನ‌ ಮಗನ ಹೆಸರನ್ನು ಎಳೆದು ತಂದಿದೆ. ಸರಿ..

ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ‌ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಬಿಜೆಪಿಯವರೇ ತನಿಖೆಗೆ ಒಪ್ಪಿಸಬೇಕು. ನಾವು ತಪ್ಪಿತಸ್ಥರೋ? ಬಿಜೆಪಿಯವರು ತಪ್ಪತಸ್ಥರೋ? ಎಂದು ತನಿಖೆಯಾಗಿ, ಸತ್ಯ ಗೊತ್ತಾಗಲಿ.

ನನ್ನ ಮಗ ರಾಕೇಶ್ ನಮ್ಮನಗಲಿ ಐದು ವರ್ಷಗಳಾಗಿವೆ, ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ.

ಇಂತಹ ಸಮಯದಲ್ಲಿ ಬಿಜೆಪಿ ಪಕ್ಷ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು "ಅತ್ಯಂತ ವೈಯಕ್ತಿಕ‌ ಮತ್ತು ಕ್ಷುಲಕತನದ' ರಾಜಕಾರಣ.

ರಾಕೇಶ್ ಜೊತೆಗೆ ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ.

ಹಾಗಿದ್ದರೆ 2018ರಲ್ಲಿ ದಾವೋಸ್ ನಲ್ಲಿ‌ ನಡೆದ ವಿಶ್ವ ಆರ್ಥಿಕ‌ ಶೃಂಗ ಸಭೆಯಲ್ಲಿ‌ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು?

ಶ್ರೀಕೃಷ್ಣನ ಜೊತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜೊತೆ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದು,ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್ ಕಾಯಿನ್ ಪಡೆದಿದ್ದ ಎಂಬ ಆರೋಪ ಇದೆ. ಆ ನಾಯಕ ಯಾರೆಂದು‌ ನಳಿನ್ ಕುಮಾರ್ ಕಟೀಲ್ ಅವರಿಗೆ ಗೊತ್ತಿರಬಹುದೇನೋ?

ನನ್ನ ಕೈಯಲ್ಲಿ ಪುರಾವೆಗಳಿಲ್ಲದ ಕಾರಣ ನಾನು ಇಲ್ಲಿಯ ವರೆಗೆ ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ. ಬಿಜೆಪಿ ಸರ್ಕಾರವೇ ಸಲ್ಲಿಸಿರುವ ಆರೋಪ‌ ಪಟ್ಟಿಯಲ್ಲಿರುವ ವಿಷಯವನ್ನಷ್ಟೇ ಹೇಳುತ್ತಿದ್ದೇನೆ. ಈ ವರೆಗಿನ ಪೊಲೀಸರ ತನಿಖೆ ಯಾರೋ ಪ್ರಭಾವಿಗಳನ್ನು ರಕ್ಷಿಸಲು ನಡೆಸಿರುವ ನಾಟಕದಂತಿದೆ. ನಮ್ಮ ಬುಟ್ಟಿಯಲ್ಲಿ ಹಾವು ಇಲ್ಲ‌ ಎಂದಾದರೆ ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ?

ಯಾಕೆ ಸರತಿ‌ ಸಾಲಲ್ಲಿ ನಿಂತು ಹೆಗಲು‌ ಮುಟ್ಟಿ ನೋಡಿಕೊಂಡು " ಸರ್ಕಾರ ತಪ್ಪು‌ ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು' ಎಂದು ಎದೆ ಬಡಿದು ಕೊಳ್ಳುತ್ತಿದ್ದಾರೆ?

ಬಿಟ್ ಕಾಯಿನ್ ಹಗರಣದಲ್ಲಿ‌ ಬಿಜೆಪಿ ನಾಯಕರ ಮಕ್ಕಳ ಹೆಸರೂ ಕೇಳಿ ಬರುತ್ತಿವೆ. ಪುರಾವೆಗಳಿಲ್ಲದೆ‌ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದೆಂದು ಸುಮ್ಮನಿದ್ದೇನೆ. ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರಿಗೆಲ್ಲ‌ ಕಚ್ಚಲಿದೆಯೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Edited By : Vijay Kumar
PublicNext

PublicNext

18/11/2021 08:00 pm

Cinque Terre

61.74 K

Cinque Terre

25

ಸಂಬಂಧಿತ ಸುದ್ದಿ