ಬೆಂಗಳೂರು: ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಮತ ಇರುವುದು ತೆರೆದ ವೇದಿಕೆಯಲ್ಲೇ ಸಾಬೀತಾಗಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ “ಡಿಕೆ ಡಿಕೆ” ಎಂಬ ಘೋಷಣೆ. ಅಲ್ಲಿಗೆ ಕಾಂಗ್ರೆಸ್ ಬಣ ರಾಜಕಾರಣದ ಇನ್ನೊಂದು ಮುಖ ಅನಾವರಣಗೊಂಡಿದೆ. ಒಡೆದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಇದು ಸಾಮಾನ್ಯವಲ್ಲವೇ ಎಂದು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಹೇಳಿದೆ.
ಕಾಂಗ್ರೆಸ್ ಮೇಲೆ ಸರಣಿ ಟ್ವೀಟಾಸ್ತ್ರ ಪ್ರಯೋಗಿಸಿರುವ ಬಿಜೆಪಿ 'ಹೌದು ಹುಲಿಯಾ' ಎಂದು ಕೂಗಲು ಟೀಮ್ ರೆಡಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ. 'ಮುಸ್ಲಿಮರು ಒಟ್ಟಾಗಬೇಕೆಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಆದರೆ ಪಿಸುಮಾತು ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಸಲೀಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ, ಉಗ್ರಪ್ಪ ಅವರಿಗೆ ಬರೇ ನೋಟೀಸ್ ನೀಡಿದೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಟೀಕೆ ಮಾಡಿದೆ.
ಇನ್ನೊಂದು ಟ್ವೀಟ್‌ನಲ್ಲಿ 'ಸಿದ್ದರಾಮಯ್ಯನವರೇ, ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಪ್ರೇರಕರಾದಿರಿ. ಟಿಪ್ಪು ಜಯಂತಿ ನಡೆಸಿದಿರಿ. ಶಾದಿ ಭಾಗ್ಯ ಕೊಟ್ಟಿರಿ. ಆದರೆ ಫಲವೇನು? ಅಲ್ಪಸಂಖ್ಯಾತರ ಸಮಾವೇಶದಲ್ಲಿ ನಿಮ್ಮ ಜೊತೆ ಅಲ್ಪಸಂಖ್ಯಾತ ಸಮುದಾಯದವರೇ ಇರಲಿಲ್ಲ. ಮೂಲ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ಡಿಕೆ ಡಿಕೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.
PublicNext
17/11/2021 08:47 pm