ಬೆಂಗಳೂರು: ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಫುಲ್ ಗರಂ ಆಗಿದೆ.
ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ವಿರೋಧ ಪಕ್ಷದಲ್ಲಿದ್ದವರು ಸರ್ಕಾರದ ಗಮನಕ್ಕೆ ತರಬೇಕಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಈ ತಿರುಗೇಟು ನೀಡಿದೆ.
ಆಗ ವಿರೋಧ ಪಕ್ಷದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ನಲಪಾಡ್ ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆಯಿದೆ ಎಂಬ ಗಂಭೀರ ಆರೋಪವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದರು. ಆ ಬಗ್ಗೆ 2018ರ ಫೆ.21ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆ ಆರೋಪವನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಆಗ ಸುಮ್ಮನಿದ್ದವರು ಈಗಿನ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ. ವಾಸ್ತವವಾಗಿ ಈಗ ನಮ್ಮ ಸರ್ಕಾರ ತನಿಖೆಗೆ ಆದೇಶಿಸಿ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಕಿಡಿಕಾರಿದೆ.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಂದಾಯ ಸಚಿವ ಆರ್.ಅಶೋಕ್, ಯುಬಿ ಸಿಟಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಸಹ ಒಬ್ಬ ಆರೋಪಿಯಾಗಿದ್ದ. ಆಗ ಕಾಂಗ್ರೆಸ್ ಸರ್ಕಾರವೇ ಇತ್ತು. ಈ ಪ್ರಕರಣದಲ್ಲಿ ಶ್ರೀಕಿಯನ್ನು ಯಾಕೆ ಬಂಧಿಸಲಿಲ್ಲ? ದೆಹಲಿಯ ಒತ್ತಡವಿತ್ತೇ ಅಥವಾ ರಾಜ್ಯದವರ ಒತ್ತಡ ಇತ್ತೇ? ವಿಶೇಷವೆಂದರೆ ಮೂರು ತಿಂಗಳ ನಂತರ ಸರ್ಕಾರ ಕೋರ್ಟ್‌ಗೆ ಶ್ರೀಕಿ ನಾಪತ್ತೆಯಾಗಿರುವ ಆರೋಪಿ ಎಂದು ಪ್ರಮಾಣ ಪತ್ರ ಸಲ್ಲಿಸುತ್ತದೆ. ಆತನ ವಿರುದ್ಧ ಕ್ರಮ ಕೈಗೊಳ್ಳದಂತೆ ಯಾರು ಪ್ರಭಾವ ಬೀರಿದ್ದರು ಎಂದು ಪ್ರಶ್ನೆಗಳ ಮಳೆಗರೆಸಿದ್ದರು.
PublicNext
16/11/2021 02:22 pm