ಬೆಂಗಳೂರು: ಇನ್ನು 15 ದಿನ ಸಮಯ ಕೊಡಿ, ಬಿಟ್ ಕಾಯಿನ್ ಹಗರಣದ ಹಗರಣದ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತನಿಖೆ ಹಾದಿ ತಪ್ಪಲು ನೀವೇ ಕಾರಣ ಆಗಬೇಡಿ. ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಅಂತ ಇದನ್ನು ಮುಚ್ಚಿಹಾಕೋದಕ್ಕೆ ಹೊರಟಿದ್ದಾರೆ ಅಂತ ಹೇಳೋಕಾಗಲ್ಲ. ತನಿಖಾ ಹಂತದಲ್ಲಿ ಯಾವುದೇ ರೀತಿ ದಾರಿ ತಪ್ಪಿಸುವ ಕೆಲಸ ಬೇಡ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾನು ಹೇಳುತ್ತೇನೆ. ಅಮೆರಿಕಕ್ಕೆ ಪ್ರಧಾನಿಗಳು ಹೋಗದೇ ಇದ್ದರೆ ಇದು ಇಷ್ಟು ದೊಡ್ಡ ಮಟ್ಟಕ್ಕೆ ಇದು ಹೋಗುತ್ತಿರಲಿಲ್ಲ. ಇನ್ನೂ ಹದಿನೈದು ದಿನ ಸಮಯ ಕೊಡಿ ಇದರ ವಾಸ್ತವಾಂಶ ಹೊರಗೆ ತೆಗೆಯುತ್ತೇನೆ ಎಂದರು.
ಹಗರಣದಲ್ಲಿ 58,000 ಕೋಟಿ ರೂ. ಅವ್ಯವಹಾರ ಆಗಿದೆ ಅಂತ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಶ್ರೀಕಿ ಎಂಬ ಯುವಕನನ್ನು ಎಂಟರಿಂದ ಹತ್ತು ಬಾರಿ ಬಂಧನ ಮಾಡಲಾಗಿದೆ. 2020ರ ನವೆಂಬರ್‌ನಿಂದ 8-10 ಬಾರಿ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದೂ ಆಗಿದೆ ಎಂದು ತಿಳಿಸಿದರು.
ಬಿಟ್ ಕಾಯನ್ ಪ್ರಕರಣ ಕಳೆದ 15 ದಿನಗಳಿಂದ ಸದ್ದು ಮಾಡುತ್ತಿದೆ. ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡುವಂತೆ ನಾಯಕರಿಗೆ ಹೇಳಲು ಬಯಸುತ್ತೇನೆ ಎಂದು ಸಲಹೆ ನೀಡಿದ್ದಾರೆ.
PublicNext
13/11/2021 10:19 pm