ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ ಕಾಯಿನ್ ಹಗರಣ..ಬೊಮ್ಮಾಯಿ ದೆಹಲಿ ದೌಡು..ತಲೆ ದಂಡ ಭೀತಿ ?

ಪಬ್ಲಿಕ್ ನೆಕ್ಸ್ಟ್ ವಿಶೇಷ : ದೆಹಲಿ ಪ್ರತಿನಿಧಿಯಿಂದ

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸಾವಿರಾರು ಕೋಟಿ ಬಿಟ್ ಕಾಯಿನ್ ಹಗರಣ ಬೂದಿ ಮುಚ್ಚಿದ ಕೆಂಡವಾಗಿದ್ದರೂ, ಯಾವುದೇ ಕ್ಷಣದಲ್ಲಿ ಭುಗಿಲೆದ್ದು ಯಾರನ್ನಾದರೂ ಬಲಿ ತೆಗೆದುಕೊಳ್ಳಬಹುದು.

ಸಿ.ಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿದ್ದಾಲೇ ಬಿಟ್ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. ಇಷ್ಟೇ ಅಲ್ಲ ಹಗರಣದ ಕಿಂಗ್ ಪಿನ್ ಕುಖ್ಯಾತ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕಾಂತ್ ರಮೇಶ್ ನಡೆಸಿದ ಬೇನಾಮಿ ವ್ಯವಹಾರದಲ್ಲಿ ರಾಜ್ಯದ ಅನೇಕ ರಾಜಕಾರಣಿಗಳು ಹಾಗೂ ಪ್ರತಿಷ್ಠಿತ ಗುತ್ತಿಗೆದಾರರ ಹೆಸರು ತಳಕು ಹಾಕಿಕೊಂಡಿತ್ತು.

ಈ ಬಗ್ಗೆ ಕಾಂಗ್ರೆಸ್ಸಿಗರು ಮಾಡುತ್ತಿರುವ ಆರೋಪಗಳನ್ನು ಬೊಮ್ಮಾಯಿ ತಳ್ಳಿ ಹಾಕುತ್ತಿರಬಹುದು, ಹಗರಣ ತೀರಾ ಮಾಮೂಲು ಎಂಬಂತೆ ವರ್ತಿಸುತ್ತಿರಬಹುದು ಆದರೆ ಒಳಗೊಳಗೆ ಅಳಕು, ಆತಂಕ ಅವರನ್ನು ಕಾಡುತ್ತಿರುವುದು ಸುಳ್ಳಲ್ಲ.

ಇದಕ್ಕೆ ಕಾರಣ ಹಗರಣ ಈಗ ಹೈಕಮಾಂಡ್ ಅಂಗಳ ತಲುಪಿರುವುದು. ಒಂದ ವೇಳೆ ಹೈಕಮಾಂಡ್ ನಾಯಕರು ಕ್ರಮಕ್ಕೆ ಮುಂದಾದರೆ ಸಿ.ಎಂ ಬೊಮ್ಮಾಯಿ ತಲೆ ದಂಡವಾದರೂ ಆಶ್ಚರ್ಯವಿಲ್ಲ, ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳಬಹುದು ಎನ್ನಲಾಗುತ್ತಿದೆ.

'ನಾಯಕತ್ವ ಬದಲಾವಣೆ ಇಲ್ಲ' ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪದೇ ಪದೇ ಹೇಳುತ್ತಿದ್ದಾರೆ ಎಂದರೆ ಬದಲಾವಣೆ ಆಗುವುದು ಖಚಿತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಏಕೆಂದರೆ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಹೀಗೇ ಹೇಳುತ್ತ ಬಂದಿದ್ದ ಅರುಣ್ ಸಿಂಗ್ ಕೊನೆಗೆ ಬಿಎಸ್ವೈ ಅವರನ್ನು ಕುರ್ಚಿಯಿಂದ ಕೆಳಗಿಳಿಸಿದ್ದರು.

ಈಗಲೂ ಅದೇ ರೀತಿ ಹೇಳುತ್ತಿದ್ದಾರೆಂದರೆ ಒಳಗೆ ಏನೋ ನಡೆದಿದೆ ಎಂದೇ ಅರ್ಥ. 'ಬೆಂಕಿ ಇಲ್ಲದೆ ಹೊಗೆ ಕಾಣಿಸಿಕೊಳ್ಳುವುದಿಲ್ಲ' ಎಂಬ ಮಾತು ದೆಹಲಿ ಹಾಗೂ ಕರ್ನಾಟಕದ ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಕೆಲ ದಿನಗಳಿಂದ ಸಂಘದ​ ನಾಯಕರು ಹಾಗೂ ರಾಜ್ಯಪಾಲರ ಬಳಿ ಎಡತಾಕುವುದನ್ನು ನೋಡಿದರೆ Bitcoin ಹಗರಣ ಅವರ ನಿದ್ದೆಗಡಿಸಿದೆ ಎಂದೇ ಹೇಳಬಹುದು.

ಇಷ್ಟೇ ಅಲ್ಲ ಸಿ.ಎಂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಿಎಂ ದಿಲ್ಲಿಯಲ್ಲಿ ಝಂಡಾ ಹೂಡಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಸಿ.ಎಂ ಬೊಮ್ಮಾಯಿ ಅವರಿಗೆ ಹೈಕಮಾಂಡಿನ ಯಾವುದೇ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಉದ್ದೇಶ ಪೂರ್ವಕವಾಗಿಯೇ ಹೈಕಮಾಂಡ್ ಬೊಮ್ಮಾಯಿ ಅವರನ್ನು ಅವೈಡ್ ಮಾಡುತ್ತಿದೆಯೋ ಅಥವಾ ಕಾಲಾವಕಾಶ ದೊರೆಯುತ್ತಿಲ್ಲವೋ ಗೊತ್ತಾಗುತ್ತಿಲ್ಲ. ಏನೇ ಆದರೂ ಬೊಮ್ಮಾಯಿ ತಳಮಳ ಹೆಚ್ಚಾದಂತೂ ಸುಳ್ಳಲ್ಲ.

ಬೊಮ್ಮಾಯಿ ಸಿ.ಎಂ ಆದ ಹೊಸದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಎಲ್ಲರೂ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದರು. ಆನಂತರದಲ್ಲಿ ಈ ಎಲ್ಲ ನಾಯಕರನ್ನು ಭೇಟಿ ಮಾಡಲು ಬೊಮ್ಮಾಯಿ ಶತಾಯಗತಾಯ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಬುಧವಾರ ರಾತ್ರಿ ದೆಹಲಿಯಲ್ಲೇ ವಾಸ್ತವ್ಯ ಇದ್ದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲೇಬೇಕೆಂದು ಬಸವರಾಜ ಬೊಮ್ಮಾಯಿ ನಿರ್ಧರಿಸಿದಂತೆ ಕಾಣುತ್ತಿದೆ.

ಸಮಾವೇಶವೊಂದರಲ್ಲಿ ಭಾಗವಹಿಸುವ ನೆಪದಲ್ಲಿ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದು ಮುಖ್ಯ ಉದ್ದೇಶ ಹೊಂದಿದ್ದಾರೆನ್ನಲಾಗುತ್ತಿದೆ.

ಇತ್ತೀಚೆಗೆ ಕರ್ನಾಟಕದ ಧಾರವಾಡದ ಬಳಿ ನಡೆದ ಆರ್ ಎಸ್ ಎಸ್ ಬೈಠಕ್ ವೇಳೆಯೂ ಹುಬ್ಬಳ್ಳಿಯಲ್ಲೇ ಠಿಕಾಣಿ ಹೂಡಿ ಆರ್ ಎಸ್ ಎಸ್ ನಾಯಕರನ್ನು ಭೇಟಿ ಆಗಲು ಪ್ರಯತ್ನಿಸಿದ್ದರೂ ಅವಕಾಶ ಸಿಕ್ಕಿರಲಿಲ್ಲ. ವಾರದ ಬಳಿಕ ಆರ್ ಎಸ್ ಎಸ್ ನಾಯಕ ಮುಕುಂದ್ ಅವರೇ ಖುದ್ದಾಗಿ ಬಂದು ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿದ್ದಾರೆ.

ಇದಾದ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಸಭೆ ನಡೆಸಿದ್ದ ಬೊಮ್ಮಾಯಿ ಕೂಡಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲೂ ಬಿಟ್ ಕಾಯಿನ್ ಹಗರಣದ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Edited By :
PublicNext

PublicNext

10/11/2021 01:39 pm

Cinque Terre

67.56 K

Cinque Terre

9

ಸಂಬಂಧಿತ ಸುದ್ದಿ