ನವದೆಹಲಿ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದರೆ “ಐ ನೀಡ್ ಕಮಿಷನ್’ ಎಂದು ಟೀಕಿಸಿರುವ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ, ರಫೇಲ್ ಯುದ್ಧ ವಿಮಾನ ಖರೀದಿ ವೇಳೆ ಲಂಚ ಕೊಡಲಾಗಿದೆ ಎಂದು ಕಾಂಗ್ರೆಸ್ ವಿನಾಕಾರಣ ಗುಲ್ಲೆಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2007-2012ರ ವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ನಡೆಸಿದ್ದ ವೇಳೆ, ಯಾವ ಮಧ್ಯವರ್ತಿಯ ಹೆಸರಿನಲ್ಲಿ ಕಮಿಷನ್ ಕೇಳಲಾಗಿತ್ತು? ಎಂಬ ಅಂಶವೂ ಬಹಿರಂಗವಾಗಿದೆ. ರಫೇಲ್ ವಿಚಾರದಲ್ಲಿ ಇಷ್ಟು ವರ್ಷಗಳವರೆಗೆ ಏಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಸುಳ್ಳನ್ನೇ ಹೇಳುತ್ತಿತ್ತು ಎಂಬುದರ ಬಗ್ಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ರಫೇಲ್ ಖರೀದಿಗಾಗಿ ಶೇ.40ರ ಪ್ರಮಾಣದಲ್ಲಿ ಕಮಿಷನ್ ಕೊಡಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು. ಕಮಿಷನ್ ಪಡೆಯುವುದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೇ ನೀವು ಜಗತ್ತಿನಲ್ಲಿ ದಾಖಲೆ ಮಾಡಿದ್ದೀರಿ ಎಂದು ಸಂಭಿತ್ ಪಾತ್ರ ವ್ಯಂಗ್ಯವಾಡಿದ್ದಾರೆ.
PublicNext
10/11/2021 08:35 am